Home ಕ್ಲಾಸಿಪೈಡ್ ಮಕ್ಕಳ ಕೈಗೆ ಪುಸ್ತಕ ಕೊಡಿ, ಟಿವಿ, ಟ್ಯಾಬು, ಮೊಬೈಲುಗಳನ್ನಲ್ಲ..!

ಮಕ್ಕಳ ಕೈಗೆ ಪುಸ್ತಕ ಕೊಡಿ, ಟಿವಿ, ಟ್ಯಾಬು, ಮೊಬೈಲುಗಳನ್ನಲ್ಲ..!

36
0
SHARE

ಪುಸ್ತಕಗಳನ್ನೋದುವ ಅಭ್ಯಾಸ/ ಹವ್ಯಾಸ ಇದ್ದುಬಿಟ್ಟರೆ ನಿನಗೆಂದೂ ಒಂಟಿ ಎಂಬ ಭಾವನೆ ಬರುವುದಿಲ್ಲ. ನೆನಪಿಡು, ಪುಸ್ತಕದಷ್ಟು ಉತ್ತಮ ಮಿತ್ರ ಬೇರಾರಿಲ್ಲ. ಹೀಗೆ ಹೇಳಿ ಬಾಲ್ಯದಲ್ಲಿ ನನ್ನಮ್ಮ ನನಗೆ ಓದುವ ಅಭಿರುಚಿಯನ್ನು ಕಲಿಸಿದ್ದು. ಅಂದು ನಮ್ಮನ್ನು ಸೆಳೆಯಲು, ಮೋಡಿ ಮಾಡಲು ಹಿಂದಿನಷ್ಟು ಪರಿಕರಗಳು ಇದ್ದಿರಲಿಲ್ಲ. ಟ್ಯಾಬ್ಲೆಟ್, ಮೊಬೈಲ್, ನೂರಾರು ಚಾನಲ್ಗಳು, ಕಾರ್ಟೂನ್ಗಳು, ಡಿಸ್ನಿ ಪಿಕ್ಚರ್ಗಳು. ಇವೆಲ್ಲಾ ಇಂದಿನ ಮಕ್ಕಳನ್ನು ಓದುವಿಕೆಯಿಂದ, ಹೊರಾಂಗಣ ಆಟಗಳಿಂದ ಬಹಳ ದೂರವಿಡತೊಡಗಿವೆ. ಓದಲು/ ಓದಿದ್ದನ್ನು ಗ್ರಹಿಸಿ ಆರಿಯಲು ತುಸು ಹೆಚ್ಚು ಶ್ರಮವಹಿಸಬೇಕು.

ಅದೇ ದೃಶ್ಯ ಮಾಧ್ಯಮ, ವಿಧವಿಧ ಇಲೆಕ್ಟ್ರಾನಿಕ್ ಆಟಗಳು ಬಹು ಚಿತ್ತಾಕರ್ಷಕ. ಮನರಂಜನೆ ಹೆಚ್ಚು ಕೊಡುವ ಇಂಥವುಗಳು ಚಟವಾಗಿ ಪರಿಣಮಿಸಿ ಹೆತ್ತವರಿಗೆ ತಲೆನೋವನ್ನು ತಂದುಬಿಟ್ಟುತ್ತದೆ. ಆದರೆ ನಾವು ಆದಷ್ಟು ಚಿಕ್ಕಂದಿನಿಂದಲೇ ನಿಧಾನವಾಗಿ ಪುಸ್ತಕಗಳತ್ತ ನಮ್ಮ ಮಕ್ಕಳನ್ನು ಸೆಳೆದರೆ ಇಂಥಾ ಚಟಗಳಿಂದ ಅವರನ್ನು ಆದಷ್ಟು ದೂರವಿರಿಸಬಹುದು. ಆಡಲು ಕುಳಿತರೆ ಸಾಕು ಗಂಟೆಗಳ ಪರಿವೆಯಿಲ್ಲದೇ, ಹಸಿವು ನೀರಡಿಕೆಯನ್ನೂ ಮರೆಸುವಂಥ ಸಾಧನಗಳು ಇಂದು ನಮ್ಮ ಮಕ್ಕಳ ಕೈಗೆ ಸಿಗುತ್ತಿವೆ.

ನಾವು ಕೊಡಿಸದಿದ್ದರೂ ಕಷ್ಟ, ಕೊಡಿಸಿದರೆ ಮತ್ತೂ ಕಷ್ಟ. ಟ್ಯಾಬ್ಲೆಟ್, ವಿಡಿಯೋ ಗೇಮ್, ಮೊಬೈಲ್ ಆಟಗಳು ಇವೆಲ್ಲಾ ಈಗ ಹೆತ್ತವರ ಪಾಲಿಗೆ ಬಹು ದೊಡ್ಡ ತಲೆನೋವಾಗಿ ಬಿಟ್ಟಿದೆ. ಅದನ್ನು ಕೊಟ್ಟಿಲ್ಲ ಎಂದರೆ ತನ್ನ ಗೆಳೆಯ/ಗೆಳತಿಯರ ಕೈಯಲ್ಲಿರುವುದನ್ನು ಉಲ್ಲೇಖಿಸಿ ಹಠ ಮಾಡುತ್ತಾರೆ ಇಲ್ಲಾ ಒಳಗೊಳಗೇ ಕೊರಗುತ್ತಾರೆ. ಕೊಡಿಸಿಬಿಟ್ಟರೆ ಅಪ್ಪ, ಅಮ್ಮನನ್ನೂ ಮರೆತು ಆಡುತ್ತಿರುತ್ತಾರೆ. ಇಂಥ ಕಾಲದಲ್ಲಿ ಓದುವ ಪ್ರವೃತ್ತಿಯತ್ತ ಮಕ್ಕಳನ್ನು ಸೆಳೆಯುವುದು ಬಹಳ ದೊಡ್ಡ ಸವಾಲು!

ಚಿತ್ರಗಳ ಮೂಲಕ ಸೆಳೆಯಿರಿ
ನನ್ನ ಮಗಳು ಅದಿತಿ ಈಗ ನಾಲ್ಕನೆಯ ತರಗತಿ ಮುಗಿಸಿ ಐದನೆಯ ತರಗತಿಗೆ ಹೋಗುತ್ತಿದ್ದಾಳೆ. ಇತರ ಮಕ್ಕಳಂತೇ ಅವಳಿಗೂ ಟ್ಯಾಬ್ಲೆಟ್, ಕಂಪ್ಯೂಟರ್ ಗೇಮ್ಗಳತ್ತ ಆಸಕ್ತಿ, ಒಲವು ಸಾಕಷ್ಟಿದೆ. ಆದರೆ ಅವುಗಳ ಜೊತೆಗೇ ಓದುವ ಹವ್ಯಾಸವೂ ಬೆಸೆದುಕೊಂಡು ಬಿಟ್ಟಿರುವುದರಿಂದ ಪುಸ್ತಕಗಳನ್ನೋದುವುದೂ ಅವಳ ಪ್ರಿಯ ಹವ್ಯಾಸಗಳಲ್ಲೊಂದಾಗಿದೆ.

ಇದಕ್ಕೆ ಕಾರಣ ಅವಳ ಬಾಲ್ಯ. ಆಕೆಗೆ ಸುಮಾರು ಎರಡು ವರುಷವಾದಾಗಲೇ ನಾವು ಅವಳಿಗಾಗಿ ಪುಟ್ಟ ಮಕ್ಕಳ ಬಣ್ಣ ಬಣ್ಣದ ದೊಡ್ಡ ಚಿತ್ರಗಳಿರುವ ಆಕರ್ಷಕ ಪುಸ್ತಕಗಳನ್ನು ತಂದುಕೊಟ್ಟಿದ್ದೆವು. ಅದರ ತುಂಬಾ ತರಕಾರಿಗಳ, ಹಣ್ಣುಗಳ, ಹೂವುಗಳ, ದಿನನಿತ್ಯ ಮಕ್ಕಳು ಬಳಸುವ ಆಟಿಕೆಗಳ ಬಣ್ಣದ ಚಿತ್ರಗಳಿದ್ದು, ಅದರ ಕೆಳಗೆ ದಪ್ಪಕ್ಷರದಲ್ಲಿ ಶೀರ್ಷಿಕೆಯಿದ್ದಿರುತ್ತದೆ. ಮೊದಮೊದಲು ಆ ಚಿತ್ರಗಳೇ ಅವಳನ್ನು ಸೆಳೆದದ್ದು.

ನಾವು ಆ ಪುಸ್ತಕವನ್ನು ಹಿಡಿದುಕೊಂಡು, ಚಿತ್ರಗಳನ್ನು ವರ್ಣರಂಜಿತವಾಗಿ ಅವಳಿಗೆ ವಿವರಿಸುತ್ತಾ, ಅವುಗಳ ವಿವರಣೆಯ ಜೊತೆ ಅವಳಿಗರ್ಥವಾಗುವಂಥ ಕತೆಗಳನ್ನು ಆ ಚಿತ್ರದೊಂದಿಗೆ ಕಟ್ಟಿ ಹೇಳತೊಡಗಿದೆವು. ನಾನೂ ಅವಳ ಜೊತೆ ಪುಸ್ತಕ ಓದಲು ಕುಳಿತುಕೊಳ್ಳತೊಡಗಿದೆ. ಕ್ರಮೇಣ ಅವಳಿಗೆ ಆ ಪುಸ್ತಕಗಳ ಮೇಲೆ ಪ್ರೀತಿ ಬೆಳೆಯಿತು. ಆಟವಾಡಿ ಬೇಸರವಾದಾಗೆಲ್ಲಾ ಅವುಗಳನ್ನು ತೆರೆದು, ನಾನು ಕಟ್ಟಿ ಹೇಳಿದ್ದ ಕಥೆಗಳನ್ನೇ ಗುನುಗಿಕೊಳ್ಳತೊಡಗಿದಳು. ನಿಧಾನಕ್ಕೆ ಆ ಕಥೆಗಳಿಗೆ ತನ್ನದೇ ಕಲ್ಪನೆಗಳನ್ನೂ ಸೇರಿಸಿ ಹೇಳತೊಡಗಿದಳು. ಹೀಗೆ ಎಳವೆಯಿಂದಲೇ ಅವಳಲ್ಲಿ ಓದುವಿಕೆಯ ಕುರಿತು ಆಸಕ್ತಿ ಹುಟ್ಟಿಸಲು, ಬೆಳೆಸಲು ನಾವು ಪ್ರಯತ್ನಿಸಿದೆವು.

ಒಂದನೆಯ ತರಗತಿಯ ನಂತರ ಆಕೆ ಕನ್ನಡ ಹಾಗೂ ಇಂಗ್ಲೀಷ್ ಎರಡೂ ಭಾಷೆಯ ಪುಸ್ತಕಗಳನ್ನು ನಿಧಾನಕ್ಕೆ ಓದಲು ಶುರು ಮಾಡಿದಳು. ಅಮರ ಚಿತ್ರ ಕಥೆಗಳು, ದಿನಕ್ಕೊಂದು ಕಥೆಗಳು, ಕಪ್ಪೆ ರಾಜಕುಮಾರಿ- ಹೀಗೆ ಅನೇಕ ಮಕ್ಕಳ ಪುಸ್ತಕಗಳು ನನ್ನ ಮನೆಯ ಲೈಬ್ರರಿಯನ್ನು ಸೇರಿದವು. ಮಕ್ಕಳನ್ನು ಹೆಚ್ಚೆಚ್ಚು ಆಕರ್ಷಿಸಲು ಬಣ್ಣ ಬಣ್ಣದ ಚಿತ್ರಗಳನ್ನೊಳಗೊಂಡ ಕಥೆಗಳ ಹೆಚ್ಚು ಸಹಕಾರಿ. ಚಿತ್ರಗಳು ಅವರ ಕಲ್ಪನಾಶಕ್ತಿಯನ್ನು ಹೆಚ್ಚಿಸಿದರೆ, ಕಥೆಯೊಳಗಿನ ವಿವರಣೆಗಳಿಗೆ ಹೆಚ್ಚು ಸ್ಪಷ್ಟತೆಯನ್ನೂ ಕೊಡುತ್ತದೆ. ಇದರಿಂದ ಅವರು ಆಸಕ್ತಿಯಿಂದ ಅಂಥ ಪುಸ್ತಕವನ್ನು ಓದಲು ಶುರುಮಾಡುತ್ತಾರೆ.

ಈಗಿನ ಕಾರ್ಟೂನ್ಗಳಲ್ಲಿ ಬರುವ ಪಾತ್ರಗಳನ್ನೊಳಗೊಂಡ ಅನೇಕ ಸಚಿತ್ರ ಕಥಾ ಪುಸ್ತಕಗಳು ಇಂದು ಲಭ್ಯವಿವೆ. ಅಂಥವುಗಳನ್ನೇ ಹೆಚ್ಚೆಚ್ಚು ನಾವು ತಂದು ಕೊಡುತ್ತಿದ್ದೇವೆ. ಟಿ.ವಿಯಲ್ಲಿ ನೋಡಿದ, ಮೆಚ್ಚಿದ ತನ್ನಿಷ್ಟದ ಪಾತ್ರದ ಚಿತ್ರಗಳ ಜೊತೆ ಬೆಸೆದಿರುವ ಹೊಸ ಕಥೆಗಳನ್ನೋದುವುದು ಅವಳಿಗೂ ಮಜವೆನಿಸುತ್ತಿದೆ.

ಹೆತ್ತವರೂ ಓದಲೇಬೇಕು
ನಮ್ಮ ಮನೆಗೆ ಕೆಲವು ಮಾಸ ಪತ್ರಿಕೆಗಳು, ದಿನ ಪತ್ರಿಕೆಯೂ ಬರುತ್ತದೆ. ಅದರಲ್ಲಿ ಪುಟ್ಟ ಮಕ್ಕಳು ಬಿಡಿಸಿದ ಚಿತ್ರಗಳು, ಮಕ್ಕಳ ಕಥೆಗಳೂ ಇರುತ್ತವೆ. ನಾನದನ್ನೋದಿ ಪ್ರಶಂಸಿಸುತ್ತೇನೆ. ಆಗ ಅವಳು ಕುತೂಹಲಗೊಂಡು ಅದನ್ನೋದಿ ತನ್ನ ಅನಿಸಿಕೆ ಹೇಳುತ್ತಾಳೆ. ಅವಳೋದಿದ್ದನ್ನು ಇಂಗ್ಲೀಷ್ ಅಥವಾ ಕನ್ನಡದಲ್ಲಿ ಬರದು ತೋರಿಸಲು ಪ್ರೋತ್ಸಾಹಿಸುತ್ತೇನೆ.

ನಾನು ಹೇಗೆ ಓದುವ ಅಭ್ಯಾಸದಿಂದ ಹೆಚ್ಚೆಚ್ಚು ವಿಷಯಗಳನ್ನು ತಿಳಿದುಕೊಂಡೆ. ಓದುವಿಕೆ ಹೇಗೆಲ್ಲಾ ನನಗೆ ಸಹಾಯ ಮಾಡಿದೆ ಎಂಬುದನ್ನೂ ಅವಳಿಗೆ ಹೇಳುತ್ತಿರುತ್ತೇನೆ. ಬಾಲ್ಯದಲ್ಲಿ ನಾನೋದಿದ್ದ ಮಕ್ಕಳ ಪುಸ್ತಕಗಳ ಕುರಿತು ಚರ್ಚಿಸುತ್ತಿರುತ್ತೇನೆ. ಅವಳ ಪುಟ್ಟ ಬರಹಗಳನ್ನು ಬಹುವಾಗಿ ಮೆಚ್ಚುತ್ತೇನೆ. ಮತ್ತಷ್ಟು ಬರೆಯಲು ಹುರಿದುಂಬಿಸುತ್ತೇನೆ. ಅವಳ ಕಲ್ಪನೆಯಲ್ಲಿ ಮೂಡಿದ ಕಥೆಗಳಿಗೆ ಅಕ್ಷರ ರೂಪ ಕೊಡಲು ಸಲಹೆ ನೀಡುತ್ತೇನೆ. ಇದರಿಂದ ಹೆಚ್ಚೆಚ್ಚು ಓದಲು, ಓದಿದ್ದನ್ನು ಗ್ರಹಿಸಿ ಸ್ವಯಂ ಏನೋ ಬರೆಯಲು ಅವಳಿಗೆ ಸ್ವೂರ್ತಿ ದೊರಕುತ್ತದೆ.

ಮಕ್ಕಳಿಗೆ ಎಷ್ಟು ಅಕ್ಕರೆ, ಪ್ರೋತ್ಸಾಹ ಸಿಗುವುದೋ ಅಷ್ಟು ಅವರು ಅರಳುತ್ತಾ ಹೋಗುತ್ತಾರೆ. ಮೊದ ಮೊದಲು ಅವರು ದಿನಕ್ಕೆ ನಾಲ್ಕು ಸಾಲೇ ಓದಲಿ. ಅದನ್ನು ಮುಕ್ತವಾಗಿ ತುಸು ಹೆಚ್ಚೇ ಹೊಗಳಿ, ಮುದ್ದಿಸಿ. ಕ್ರಮೇಣ ಸಾಲುಗಳು ಪುಟಗಳಾಗಿ ಮಾರ್ಪಡುವುದರಲ್ಲಿ ಯಾವುದೇ ಸಂಶಯವಿಲ್ಲ.

ಬದಲಾಗಿ ಕಾಲಘಟ್ಟದ ಜೊತೆಗೆ ನಾವೂ ಬದಲಾಗುತ್ತಾ, ಅನೇಕ ಹೊಸ ಎಲೆಕ್ಟ್ರಾನಿಕ್ ವಸ್ತುಗಳ ಸೆಳೆತದ ನಡುವೆಯೇ ಆದಷ್ಟು ಪುಸ್ತಕ ಪ್ರೀತಿಯನ್ನು, ಓದುವಿಕೆಯನ್ನು ಮಕ್ಕಳಲ್ಲಿ ಹೆಚ್ಚಿಸಲು ಮೊದಲು ಹೆತ್ತವರು ಅವರ ಮುಂದೆ ಪುಸ್ತಕಗಳನ್ನು ಹಿಡಿಯಬೇಕು. ಆಗಲೇ ನಮ್ಮನ್ನೇ ಹೆಚ್ಚು ಅನುಸರಿಸುವ ನಮ್ಮ ಮಕ್ಕಳೂ ಬಹುಬೇಗ ಇಂಥಾ ಉತ್ತಮ ಹವ್ಯಾಸದತ್ತ ವಾಲುತ್ತಾ ಹೋಗುತ್ತಾರೆ. ನನ್ನ ಮಗಳೂ ಈಗ ನನ್ನಂತೆಯೇ ಪುಸ್ತಕ ಪ್ರಿಯಳು ಎನ್ನಲು ಬಹಳ ಹೆಮ್ಮೆಯಾಗುತ್ತದೆ.

ಇ-ಗ್ಯಾಜೆಟ್ನಿಂದ ದೂರವಿಡಿ
ಕಣ್ಣುಗಳ ಮಹತ್ವ, ಅವುಗಳ ಆರೈಕೆ. ಹೇಗೆಲ್ಲಾ ಅವು ಹಾಳಾಗುತ್ತವೆ. ಎಂಬುದನ್ನು ಗೂಗಲ್ ಮಾಡಿ ಕೆಂಗಣ್ಣಿನ ದೊಡ್ಡ ಚಿತ್ರಗಳನ್ನು ತೋರಿಸಿ. ಟ್ಯಾಬ್ಲೆಟ್, ಕಂಪ್ಯೂಟರ್ಗಳನ್ನು ಹೆಚ್ಚೆಚ್ಚು ನೋಡುವುದರಿಂದ ಕಣ್ಣುಗಳು ಹೇಗೆ ಹಾನಿಗೊಳ್ಳುತ್ತವೆ ಎಂದು ವಿವರಿಸಿ. ಇದರಿಂದಾಗಿ ಮಕ್ಕಳು ಭಯದಿಂದಲೇ ಆದರೂ ಸರಿಯೇ ಹೆಚ್ಚು ಹೊತ್ತು ಅಂಥ ಆಟಗಳನ್ನಾಡುವುದಿಲ್ಲ. ನಾವು ಎಚ್ಚರಿಸಿದ ಕೂಡಲೇ ಬಿಟ್ಟು, ಪುಸ್ತಕಗಳನ್ನೋದುವುದೋ ಅಥವಾ ಹೊರಗೆ ಹೋಗಿ ಆಡುವುದನ್ನೋ ಮಾಡುತ್ತಾರೆ. ಮಕ್ಕಳಿಗೆ ವಿಷಯಗಳನ್ನು ಸ್ಪಷ್ಟಪಡಿಸುವುದರಿಂದಲೂ ಇಂಥ ಸಲ್ಲದ ಚಟಗಳಿಂದ ಅವರನ್ನು ದೂರವಿಡಬಹುದು.

LEAVE A REPLY

Please enter your comment!
Please enter your name here