ಇಲ್ಲಿನ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಕಿಮ್ಸ್) ವಿದ್ಯಾರ್ಥಿನಿ ಕೊಪ್ಪಳದ ಪವಿತ್ರಾ ಮದಿನೂರ ಪದವಿ ಪರೀಕ್ಷೆಯಲ್ಲಿ ನಾಲ್ಕು ವಿಷಯಗಳಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸುವ ಮೂಲಕ ನಾಲ್ಕು ಚಿನ್ನದ ಪದಕಗಳನ್ನು ಕೊರಳಿಗೇರಿಸಿಕೊಂಡರು. ಸ್ವಾಯತ್ತ ಸಂಸ್ಥೆಯಾದ ಕಿಮ್ಸ್ನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ, ಪವಿತ್ರಾ ಸೇರಿದಂತೆ 145 ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಪದವಿ ಪ್ರದಾನ ಮಾಡಲಾಯಿತು. ಓದುಗರು ನೀಡುವ ‘ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ವಿದ್ಯಾರ್ಥಿ ವೇತನ ನಿಧಿ’ಯಿಂದ ನೀಡುವ ಸ್ಕಾಲರ್ ಶಿಪ್ಅನ್ನು ಪವಿತ್ರಾ ಪಡೆದಿದ್ದರು. ಎಸ್ಎಸ್ಎಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದ್ದಕ್ಕಾಗಿ ಅವರಿಗೆ ಈ ನೆರವು ನೀಡಲಾಗಿತ್ತು.
ವೈದ್ಯಕೀಯ ಪದವಿಯಲ್ಲಿ ಮೂರನೇ ರ್ಯಾಂಕ್ ಪಡೆದಿರುವ ಇವರು ಕಿವಿ, ಮೂಗು, ಗಂಟಲು ಚಿಕಿತ್ಸೆ, ಅಂಗ ರಚನಾ ವಿಜ್ಞಾನ, ಸಾಮಾನ್ಯ ಶಸ್ತ್ರಚಿಕಿತ್ಸೆ, ಪ್ರಸೂತಿ ಹಾಗೂ ಸ್ತ್ರೀರೋಗ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ದಾರೆ. ‘ನಮ್ಮೂರು ಕೊಪ್ಪಳದ ಹರೇಸಿಂದೋಗಿ. ನಮ್ಮದು ಮಧ್ಯಮ ವರ್ಗದ ರೈತ ಕುಟುಂಬ. ಮಗಳು ಧಾರವಾಡ ಜೆಎಸ್ಎಸ್ ನಲ್ಲಿ ಓದುತ್ತಿದ್ದಾಗ ಎಸ್ಎಸ್ಎಲ್ಸಿ ಯಲ್ಲಿ ಉತ್ತಮ ಅಂಕ ಗಳಿಸಿದ್ದಳು. ‘ಪ್ರಜಾವಾಣಿ’ ಅವಳ ಪ್ರತಿಭೆ ಗುರುತಿಸಿ ಸ್ಕಾಲರ್ಶಿಪ್ ನೀಡಿತ್ತು. ಚಿಕ್ಕ ಮೊತ್ತವಾಗಿದ್ದರೂ, ಆಗಿನ ಸಂದರ್ಭದಲ್ಲಿ ಆ ಹಣ ನಮಗೆ ಅಮೂಲ್ಯವೇ ಆಗಿತ್ತು’ ಎಂದು ಪವಿತ್ರಾ ಅವರ ತಂದೆ ಶರಣ ಬಸವರೆಡ್ಡಿ ಮದಿನೂರ ಹೇಳಿದರು. ‘ಹತ್ತನೇ ತರಗತಿಯವರೆಗೆ ನಾನು ಕನ್ನಡ ಮಾಧ್ಯಮದಲ್ಲಿ ಓದಿದ್ದೇನೆ. ಎಂಬಿಬಿಎಸ್ ಮಾಡಬೇಕೆಂಬ ಕನಸು ಮೊದಲಿನಿಂದಲೂ ಇತ್ತು. ಅದರಂತೆ, ಪಿಯುಸಿಯಲ್ಲಿ ಉತ್ತಮ ಅಂಕಗಳು ಲಭಿಸಿದ್ದರಿಂದ ಕಿಮ್ಸ್ನಲ್ಲಿ ಸೀಟು ದೊರೆಯಿತು. ಈಗ ಕನಸು ನನಸಾಗಿದೆ’ ಎಂದು ಪವಿತ್ರಾ ಹೇಳಿದರು.
ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯುವ ಅರ್ಹತಾ ಪರೀಕ್ಷೆ ಸೀಟ್ನಲ್ಲಿ 2, 179ನೇ ರ್ಯಾಂಕ್ ಪಡೆದಿರುವವರು, ಕರ್ನಾಟಕ ರ್ಯಾಂಕಿಂಗ್ನಲ್ಲಿ 356ನೇ ಸ್ಥಾನದಲ್ಲಿದ್ದಾರೆ.
ಹೈ-ಕ ಪ್ರಾಬಲ್ಯ: ಕಲಬುರ್ಗಿಯವರಾದ ಡಾ.ಸಂಜನಾ ದೇವರಮನಿ ಮೊದಲ ಯಾರ್ಂಕ್ ಹಾಗೂ ಡಾ. ಸನ್ನಿಧಿ ಸ್ವಾಮಿ ಎರಡನೇ ರ್ಯಾಂಕ್ ಎರಡನೇ ರ್ಯಾಂಕ್ ಪಡೆದಿದ್ದು ಹೈದರಾಬಾದ್ ಕರ್ನಾಟಕ ಭಾಗದವರೇ ಮೊದಲ ಮೂರು ರ್ಯಾಂಕ್ ಪಡೆದ ಹಿರಿಮೆಗೆ ಪಾತ್ರರಾದರು.