Home ಕ್ಲಾಸಿಪೈಡ್ ನೂರಾರು ನಾಟಿ ಬೀಜಗಳ ಒಡತಿ.

ನೂರಾರು ನಾಟಿ ಬೀಜಗಳ ಒಡತಿ.

33
0
SHARE

18 ವರ್ಷದ ಹಿಂದ ನಾನ್ ಮದ್ವಿಯಾಗಿ ಮನೀಗೆ ಬಂದಾಗ ನಂಗ 18 ವರ್ಷ. ನನ್ ಅತ್ತಿ-ಮಾವ ನಾಟಿ ಬೀಜ ಕೂಡಿಡ್ತಿದ್ರು. ಅವ್ರ ಹಾದೀಲೇ ನಡ್ದು 18 ವರ್ಷದಿಂದ ನನ್ ಗಂಡನ ಮನೆಯವರ ಸಹಾಯದಿಂದ ನಾನೇ ನಾಟಿ ಬೀಜ ರಕ್ಷಣೆ ಮಾಡಾಕತ್ತೇನ್ರಿ.

ತರಕಾರಿ, ಹಣ್ಣು-ಹಂಪಲು ಅಂತ 100ಕ್ಕೂ ಹೆಚ್ ನಾಟಿ ಬೀಜ ನಮ್ ಹತ್ರ ಅದಾವ್ರಿ. 10 ಎಕ್ರೆ ಭೂಮಿ, ಇವನ್ನೇ ಬೆಳೀತೀವಿ. ನಮ್ದು ಸಾವಯವ ಬೆಳಿ. ಬೇಡಕಿನೂ ಭಾಳೈತಿ. ಮಾರ್ಕೆಟ್ನಾಗೂ ಮುಗಿಬಿದ್ದು ಖರೀದಿ ಮಾಡ್ತಾರ. ಹೊಲದಾಗೂ ನಮ್ಮನಿ ಮಂದಿನೇ ದುಡಿಯೋದು, ಮಾರಾಟ ಮಾಡೋದೂ ನಾವೇರಿ. ಅದ್ಕೆನೇ ಕೂಲಿ ಗೀಲಿ ಅಂತ ಹೆಚ್ಚು ಖರ್ಚು ಆಗಾಕಿಲ್ರಿ.

ನಾಟಿ ಬೀಜಾನ್ನ ಜತನದಿಂದ ಕಾಪಾಡೂದು ಕಷ್ಟಾನೇ. ಅದ್ಕೆ ಇದ್ರ ಉಸಾಬರಿನೇ ಬೇಡಾ ಅಂತ ಲಗೂನೆ ಲಾಭಾ ಸಿಗಬೇಕು ಅಂತಾ ಹೆಚ್ಚಿನವ್ರು ಅಂಗ್ಡಿಯಲ್ಲಿ ಸಿಗೋ ರಾಸಾಯನಿಕನೇ ಖರೀದಿಸಿ ಭೂಮಿ ತಾಯಿಗೆ ವಿಷಾ ಉಣ್ಣಿಸಾಕತ್ತಾರೀ. ಭವಿಷ್ಯದಾಗ ಅವರಿಗೆಲ್ಲಾ ತಪ್ಪಿನ ಅರಿವಾಗ್ತೈತಿ. ನಾಟಿ ಬೀಜ ರಕ್ಷಣೆ ಮಾಡೂ ಮುಂದೆ ಅದ್ರ ಬಗ್ಗೆ ಸರಿಯಾಗಿ ತಿಳ್ಕೋ ಬೇಕ್ ನೋಡ್ರಿ.. ಅವಕ್ಕೆ ಹುಳ-ಕೀಟ ಎಲ್ಲಾ ಬರದ್ಹಂಗ ಜೋಪಾನ ಮಾಡಬೇಕ್ರಿ. ಬದನಿ, ಬೆಂಡಿಕಾಯಿ ಬೀಜನ್ನ ಬೂದಿಯೊಳಗ ಮುಚ್ಚಿಡ್ಬೇಕು.

ಸೋಡಿಗೆ, ಬೆಂಡಿ, ಹೀರೆ ಬೀಜಾನ್ನ ಸಿಪ್ಪಿಜೊತಿಗೇ ಒಣಗಿಸಿಡ್ಬೇಕು, ಹಾಗಲ ಬೀಜ ಸೆಗಣಿಯೊಳಗ ಕಲಸಿ ಅಡುಗೆ ಒಲೆಯ ಹಿಂಭಾಗದ ಗೋಡೆಗೆ ಹೊಡೆದಿಡ್ಬೇಕು. ಕೃಷಿಗೆ ಉಳುಮೆ, ಗೊಬ್ಬರ, ನೀರು ನಿರ್ವಹಣೆ ಎಷ್ಟು ಮುಖ್ಯಾನೋ ಹಾಗೆನೇ ಸೂಕ್ತ ಬೀಜ ಸಂಗ್ರಹಿಸಿ ಬರು ವರ್ಷಕ್ಕಾಗೋ ಥರ ಜಾಗ್ರತೆಯಲ್ಲಿ ಬಚ್ಚಿಡುವ ಜಾಣ್ಮೆನೂ ಬೇಕಾಗ್ತೈತಿ. ಎಲ್ ನೋಡಿದ್ರೂ ಸಾಲ ಅಂತಾರೀ. ನಾವು ಸಾಲಾನೇ ಮಾಡಿಲ್ಲ. ಕಳೆದ ವರ್ಷ ಸ್ವಲ್ಪ ಲಾಸ್ ಆತು, ಅದೂ ಬರ ಇತ್ತಲ್ಲ ಅದ್ಕೆ.

ಆದ್ರೆ ಜಮೀನಿನಲ್ಲಿ ನೀರಿನ ಶೇಖರಣೆ ಮಾಡಿದ್ರಿಂದ ಈ ವರ್ಷ ಇನ್ನೂ ನೀರು ಐತಿ. ಅರಿಶಿಣದಿಂದ ಪುಡಿ, ಗೋಧಿಯಿಂದ ಹಿಟ್ಟು, ಜವೇಗೋಧಿಯಿಂದ ರವೆ.. ಇವೆಲ್ಲಾ ಮಾಡಿ ನಮ್ ಬೆಳೆಯ ಮೌಲ್ಯವರ್ಧನೆ ಮಾಡಾಕತ್ತೀವಿ. ಬೆಳೆಗಳ ಬೆಲೆಯಲ್ಲಿ ಏರುಪೇರಾದ್ರೂ ಇವುಗಳಿಂದ ಯಾವಾಗ್ಲೂ ಲಾಭ ಸಿಗ್ತದ. ಲುಕ್ಸಾನು ಅನ್ನೂದು ಇಲ್ವೇ ಇಲ್ಲಾ. ಸಾಲ-ಗೀಲಾ ಅನ್ನೂ ಸಮಸ್ಯೆನೂ ಇಲ್ಲ.

LEAVE A REPLY

Please enter your comment!
Please enter your name here