Home ಕ್ಲಾಸಿಪೈಡ್ ಶಿಕ್ಷಣದಿಂದ ದೂರ ಉಳಿಯೋ ಬಡವರಿಗೆ ಬೆಳಕು

ಶಿಕ್ಷಣದಿಂದ ದೂರ ಉಳಿಯೋ ಬಡವರಿಗೆ ಬೆಳಕು

31
0
SHARE

ಆರ್ಥಿಕ ಸಂಕಷ್ಟದಿಂದ ಇಂದೂ ಅದೆಷ್ಟೋ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಂದುವರಿಸಲಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಇಲ್ಲೋಬ್ಬರು ವ್ಯಕ್ತಿ ಇಂತವರನ್ನು ಗುರುತಿಸಿ ಅವರ ಮುಂದಿನ ವ್ಯಾಸಂಗದವರೆಗೂ ಆರ್ಥಿಕವಾಗಿ ಸಹಾಯ ಮಾಡುತ್ತಿದ್ದಾರೆ. ಇವರು ಎಲೆಮರೆ ಕಾಯಿಯಂತೆ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣದಿಂದ ದೂರ ಉಳಿದವರ ಬದುಕಿನಲ್ಲಿ ಹೊಸ ಆಶಾಕಿರಣವನ್ನು ಮೂಡಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನವರಾದ ಪ್ರೇಮಕುಮಾರ್, ವೃತ್ತಿಯಲ್ಲಿ ಕೇಬಲ್ ಆಪರೇಟರ್ ಜೊತೆಗೆ ಹಿರಿಯೂರು ನಗರಸಭೆಯ ಸದಸ್ಯರೂ ಆಗಿದ್ದಾರೆ. ಸುಮಾರು 8 ವರ್ಷಗಳಿಂದ ತಾಲೂಕಿನಾದ್ಯಂತ ಎಸ್ಎಸ್ಎಲ್ಸಿ ಯಲ್ಲಿ ಉತ್ತೀರ್ಣರಾಗಿ ವಿದ್ಯಾಭ್ಯಾಸ ಮುಂದುವರೆಸಲಾಗದೆ ಇರುವ ವಿದ್ಯಾರ್ಥಿಗಳಿಗೆ ಇವರೇ ಪೋಷಕರಾಗಿದ್ದಾರೆ.
ಪ್ರಥಮ ಪಿಯುಸಿಯಿಂದ ಆ ವಿದ್ಯಾರ್ಥಿಗಳು ಎಲ್ಲಿಯವರೆಗೂ ಓದಲು ಬಯಸುತ್ತಾರೋ, ಅಲ್ಲಿಯವರೆಗೂ ಎಲ್ಲಾ ಖರ್ಚುವೆಚ್ಚವನ್ನು ಇವರೇ ನೋಡಿಕೊಳ್ಳುತ್ತಾರೆ. ಪ್ರತಿ ವರ್ಷಸುಮಾರು 50 ವಿದ್ಯಾರ್ಥಿಗಳಿಗೆ ಪ್ರೇಮಕುಮಾರ್ ಅವರೇ ಶೈಕ್ಷಣಿಕ ಬದುಕನ್ನು ಕಂಡುಕೊಂಡಿದ್ದಾರೆ.

ಪ್ರತಿ ವರ್ಷ ಎಸ್ಎಸ್ಎಲ್ಸಿ ಫಲಿತಾಂಶ ಬಂದ ಕೆಲ ದಿನಗಳ ಬಳಿಕ ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಗಳಿಗೆ ಪ್ರೇಮಕುಮಾರ್ ಪತ್ರ ಬರೆಯುತ್ತಾರೆ. ಪತ್ರದಲ್ಲಿ ಓದಲು ಆಸಕ್ತಿ ಇರುವ, ಆರ್ಥಿಕವಾಗಿ ತೊಂದರೆಗೆ ಸಿಲುಕಿ ವಿದ್ಯಾಭ್ಯಾಸ ಮುಂದುವರೆಸಲು ಸಾಧ್ಯವಾಗದ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳತ್ತಾರೆ. ಬಳಿಕ ಅವರೇ ನೇರವಾಗಿ ಆ ವಿದ್ಯಾರ್ಥಿಗಳನ್ನು ಹಾಗೂ ಕುಟುಂಬಸ್ಥರನ್ನು ಭೇಟಿ ಮಾಡುತ್ತಾರೆ. ಶಿಕ್ಷಣದಿಂದ ವಂಚಿತರಾಗುತ್ತಿರುವ ವಿದ್ಯಾರ್ಥಿಗಳಿಗೆ ಕಾಲೇಜಿನ ಶುಲ್ಕ ಸೇರಿದಂತೆ ಪ್ರತಿಯೊಂದು ಹಂತದಲ್ಲೂ ಆರ್ಥಿಕವಾಗಿ ಸಹಾಯ ಮಾಡುವ ಮಾತು ನೀಡಿ ಸರ್ಕಾರಿ ಕಾಲೇಜಿಗೆ ದಾಖಲಿಸುತ್ತಾರೆ. ಇಲ್ಲಿಯವರೆಗೂ ಅದೆಷ್ಟೋ ಜನ ಇವರ ಸಹಾಯ ಪಡೆದುಕೊಂಡಿದ್ದಾರೆ. ಅವರಲ್ಲಿ ಓರ್ವ ಐಎಎಸ್ ಕೂಡ ವ್ಯಾಸಂಗ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರವೂ ವ್ಯಾಪಾರಿಕರಣವಾಗಿದೆ.
ಮನೆಯಲ್ಲಿರುವ ಓರ್ವ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಎಣಗಾಡುತ್ತಿರುವ ಸಂದರ್ಭದಲ್ಲಿ ಗುರುತು ಪರಿಚಯವೇ ಇಲ್ಲದ ನೂರಾರು ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಬೆನ್ನೆಲುಬಾಗಿ ನಿಂತಿರುವ ಪ್ರೇಮಕುಮಾರ್ ಅವರ ಕೆಲಸ ಮತ್ತೊಬ್ಬರಿಗೆ ಮಾರ್ಗದರ್ಶನವಾಗಲಿ.

ಕೋಟಿ ರೂ. ಗೂ ಹೆಚ್ಚಿನ ಆಸ್ತಿ ಕಾಲೇಜಿಗೆ ಕೊಟ್ಟರು
ದೇಶದ ಗಡಿ ಕಾಯುವ ಯೋಧರು, ನಿವೃತ್ತಿಯ ನಂತರವೂ ಸೈನಿಕರೇ ಆಗಿರುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಸೈನಿಕರೊಬ್ಬರು ನಿವೃತ್ತಿಯ ನಂತರವೂ ತಾನು ಹುಟ್ಟಿದ ಊರು, ಅಲ್ಲಿನ ಜನ, ಸಮಾಜ ಚೆನ್ನಾಗಿ ಇರಬೇಕು ಎಂದು ಸಮಾಜ ಸೇವೆ ಮಾಡುತ್ತಿದ್ದಾರೆ. ಭಾರತೀಯ ಸೇವೆಯ ನಿವೃತ್ತ ಕ್ಯಾಪ್ಟನ್ ಆಗಿರುವ ಸುಬ್ಬರಾಯಪ್ಪ, ಕ್ಯಾಪ್ಟನ್ ಸುಬ್ಬರಾಯಪ್ಪ ಎಂದೇ ಪ್ರಸಿದ್ಧಿ ಹೊಂದಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣದ ನಿವಾಸಿಯಾಗಿರುವ ಇವರು, ಸದ್ಯ ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದಾರೆ. ದೇಶದ ಗಡಿ ಕಾಯುತ್ತಾ, ದೇಶ ಸೇವೆ ಮಾಡಿದ್ದ ಸುಬ್ಬರಾಯಪ್ಪ, ನಿವೃತ್ತಿಯಾದ ನಂತರ ಕಳೆದ 8 ವರ್ಷಗಳಿಂದ ತಮ್ಮೂರಿನ ಸೇವೆ ಮಾಡುತ್ತಿದ್ದಾರೆ. ಪ್ರತಿವರ್ಷ ಗುಡಿಬಂಡೆಗೆ ಹೋಗುವ ಸುಬ್ಬರಾಯಪ್ಪ, ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್, ತಟ್ಟೆ, ಲೋಟ ನೀಡುತ್ತಾರೆ. ಗುಡಿಬಂಡೆ ತಾಲೂಕಿನ 70 ಶಾಲೆಗಳಿಗೆ ಇವರು ಸಹಾಯ ಮಾಡಿದ್ದಾರೆ. ಅಲ್ಲದೇ ತಾವು ವ್ಯಾಸಂಗ ಮಾಡಿದ್ದ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಸಹಾಯ ಮಾಡುತ್ತಾರೆ.

ಆಸ್ತಿ ದಾನ: ಇದಲ್ಲದೇ ಗುಡಿಬಂಡೆ ಪಟ್ಟಣದಲ್ಲಿ ಕೋಟಿ ರೂ. ಹೆಚ್ಚು ಬೆಲೆ ಬಾಳುವ 3 ಎಕರೆ ಭೂಮಿಯನ್ನು ಸರ್ಕಾರಿ ಪದವಿ ಪೂರ್ವ ಕಾಲೇಜು ನಿರ್ಮಾಣಕ್ಕಾಗಿ ಉಚಿತವಾಗಿ ನೀಡಿದ್ದಾರೆ. ಶಿಕ್ಷಣದಿಂದ ಯಾರೂ ವಂಚಿತರಾಗಬಾರದು. ತಾನು ಸಣ್ಣವನಿದ್ದಾಗ ಪಟ್ಟ ಕಷ್ಟ ಯಾರು ಪಡಬಾರದು ಎನ್ನುವುದು ಸುಬ್ಬರಾಯಪ್ಪನವರ ಆಸೆಯಾಗಿದೆ. ಇವರ ಈ ಸೇವೆಗೆ ಪತ್ನಿ ಸರಸ್ವತಮ್ಮ ಸೇರಿದಂತೆ ಸಂಪೂರ್ಣ ಕುಟುಂಬ ಸಾಥ್ ನೀಡುತ್ತಿದೆ. ಹಲವು ವರ್ಷಗಳ ಕಾಲ ಸೇನೆಯಲ್ಲಿದ್ದ ಸುಬ್ಬರಾಯಪ್ಪ, ಗಡಿ ಕಾಯುವ ಮೂಲಕ ದೇಶ ಸೇವೆ ಮಾಡುತ್ತಿದ್ದರು. ಈಗ ನಿವೃತ್ತಿಯ ಬಳಿಕ ಹುಟ್ಟೂರಿನ ಶ್ರೇಯಸ್ಸಿಗಾಗಿ ಸೇವೆ ಮಾಡುತ್ತಿರುವ ಸುಬ್ಬರಾಯಪ್ಪ ಎಲ್ಲರಿಗೂ ಮಾದರಿಯಾಗಿದ್ದಾರೆ.

LEAVE A REPLY

Please enter your comment!
Please enter your name here