Home ಕ್ಲಾಸಿಪೈಡ್ 120 ದೇಶಗಳಲ್ಲಿ ಗದಗದ ಕೊಳಲು ಫೇಮಸ್!

120 ದೇಶಗಳಲ್ಲಿ ಗದಗದ ಕೊಳಲು ಫೇಮಸ್!

40
0
SHARE

ಸಂಗೀತಕ್ಕೆ ತಲೆದೂಗದೇ ಇರುವವರು ಯಾರೂ ಇಲ್ಲ. ಹೀಗಾಗಿಯೇ ಜಿಲ್ಲೆಯಲ್ಲೊಬ್ಬ ಬಡ ಸಂಗೀತಗಾರನ ಕೊಳಲಿನ ನಾದ ಪ್ರಪಂಚದ 120 ದೇಶಗಳಲ್ಲಿ ಮೊಳಗುತ್ತಿದೆ. ಗದಗ ನಗರದ ರಮೇಶ ಬಾಕಳೆ ಅವರು ತಯಾರಿಸುವ ಕೊಳಲು ಪ್ರಪಂಚದ 120 ದೇಶಗಳಿಗೆ ಮಾರಾಟವಾಗುತ್ತಿರುವುದು ರಾಜ್ಯಕ್ಕೆ ಹೆಮ್ಮೆ ತರುವಂತಹ ವಿಚಾರವಾಗಿದೆ. ರಮೇಶ್ ಅವರು ಗದಗದ ಲಿಂ. ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಶಿಷ್ಯರಾಗಿ ಸಂಗೀತದಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರು ತಯಾರಿಸಿದ ಕೊಳಲುಗಳು ಶ್ರೀಲಂಕಾ, ಆಸ್ಟ್ರೇಲಿಯಾ, ಪಾಕಿಸ್ತಾನ, ಅಮೆರಿಕಾ, ಜಪಾನ್, ಲಂಡನ್, ಸಿಂಗಾಪೂರ, ಮಲೇಷ್ಯಾ ಸೇರಿದಂತೆ 120 ಪ್ರತಿಷ್ಠಿತ ದೇಶಗಳಿಗೆ ರವಾನೆಯಾಗುತ್ತವೆ.

ಕೊಳಲು ವಾದಕರು: ಕೊಳಲು ನುಡಿಸುವ ಪ್ರತಿಷ್ಠಿತರು ರಮೇಶ್ ತಯಾರಿಸುವ ಕೊಳಲನ್ನೇ ಖರೀದಿಸಲು ಮುಂದಾಗಿದ್ದಾರೆ. ಗದಗ ನಗರದ ಉದಯೋನ್ಮುಖ ರಮೇಶ ಕಳೆದ 20 ವರ್ಷಗಳಿಂದ ಇದನ್ನೇ ಕಾಯಕವನ್ನಾಗಿಸಿಕೊಂಡಿದ್ದಾರೆ. ರಮೇಶ ಅವರು ತಯಾರಿಸಿದ ಕೊಳಲನ್ನು ಪ್ರಸಿದ್ಧ ಕಲಾವಿದರಾದ ಪುಣೆಯ ಪಂಡಿತ ರಾಜೇಂದ್ರ ಕುಲಕರ್ಣಿ, ಮಲೇಷ್ಯಾದ ಶ್ರೀವಾಶ್, ಕೆನಡಾದ ಸೈಯ್ಯದ್ ಹುಸೇನ್, ಪಾಕಿಸ್ತಾನದ ಸಲ್ಮಾನ್ ಆದಿನ್, ದುಬೈನ ಸಿರಾಜ್ ಅಹ್ಮದ್, ಸಿಂಗಾಪುರದ ಮನಿಮರನ್, ಅಮೆರಿಕಾದ ಡಾ. ರಾಜನ್, ಲಂಡನ್ನ ವಿಕಾಸ ಚೌಧರಿ ಮತ್ತು ನೊಮಿ, ಪ್ರವೀಣ ಗೋಡ್ಖಿಂಡಿ ಸೇರಿದಂತೆ ಅನೇಕರು ಇವರು ತಯಾರಿಸಿದ ಕೊಳಲನ್ನು ನುಡಿಸಿದ್ದಾರೆ.
ಹಣವೆಷ್ಟು?: ರಮೇಶ್ ತಯಾರಿಸುವ ಕೊಳಲುಗಳಲ್ಲಿ ಮುಖ್ಯವಾಗಿ ಹಿಂದುಸ್ತಾನಿ ಹಾಗೂ ಕರ್ನಾಟಕ ಸಂಗೀತದ ಕೊಳಲಿಗೆ ಹೆಚ್ಚು ಬೇಡಿಕೆ ಇದೆ. ರಮೇಶ್ ಬಾಕಳೆ ಅವರು ತಯಾರಿಸಿದ 30 ವಿವಿಧ ಕೊಳಲುಗಳು 1500 ರೂ.ಗಳಿಂದ 4,000 ರೂ.ವರೆಗೆ ಮಾರಾಟವಾಗುತ್ತವೆ.

ಅಸ್ಸಾಂನಿಂದ ಕೊಳಲು ತಯಾರಿಕೆಗೆ ಬೇಕಾದ ಸಾಮಾಗ್ರಿಗಳನ್ನು ಖರೀದಿಸಿ ಕೊಳಲು ತಯಾರಿಸುತ್ತಾರೆ.
ಹೆಮ್ಮೆಯಿದೆ: ನಾನು ಈ ಮಟ್ಟಕ್ಕೆ ಬೆಳೆಯಲು ನಮಗಿದ್ದ ಬಡತನವೇ ಕಾರಣ. ಸುಪ್ರಸಿದ್ಧ ಕೊಳಲು ಸಂಗೀತ ಗಾಯಕರು ನಾನು ತಯಾರಿಸಿದ ಕೊಳಲು ನುಡಿಸುತ್ತಿರುವುದು ನನಗೆ ಹೆಮ್ಮೆಯ ವಿಷಯ ಎನ್ನುತ್ತಾರೆ ರಮೇಶ್. ದಿನಕ್ಕೆ 10ರಿಂದ20 ಕೊಳಲನ್ನು ರಮೇಶ್ ತಯಾರಿಸುತ್ತಾರೆ. ಬಡತನದಲ್ಲಿರುವ ನಾವು, ನಮ್ಮ ಮಗ ಮಾಡುತ್ತಿರುವ ಕೆಲಸ ನೋಡಿ ತುಂಬಾನೆ ಬೈಯುತ್ತಿದ್ದೆವು. ಈಗ ಇವನ ಸಾಧನೆ ನೋಡಿ ನಮಗೆ ತುಂಬಾ ಹೆಮ್ಮೆ ಎನಿಸುತ್ತದೆ ಎನ್ನುತ್ತಾರೆ ರಮೇಶ್ ತಂದೆ ನಾರಾಯಣಸಾ ಬಾಕಳೆ.
ಸದ್ಯ ಇವರು ದೇಶ, ವಿದೇಶದಲ್ಲಿಯೂ ಕೂಡ ವಿಭಿನ್ನ ಹಾಗೂ ವಿಶಿಷ್ಟವಾಗಿ ಕೊಳಲು ತಯಾರಿಸುವ ಮೂಲಕ ಹೆಸರು ವಾಸಿಯಾಗಿದ್ದಾರೆ. ಇಂತಹ ಒಬ್ಬ ಅಪರೂಪದ ಸಂಗೀತ ಸಾಧಕರನ್ನು ಸರ್ಕಾರ ಗುರುತಿಸಬೇಕಿದೆ.

LEAVE A REPLY

Please enter your comment!
Please enter your name here