Home ಕ್ಲಾಸಿಪೈಡ್ ಅಪಘಾತದಲ್ಲಿ ಮಗ ಪ್ರಾಣ ಕಳೆದುಕೊಂಡ ನಂತರ ರಸ್ತೆಗುಂಡಿ ಮುಚ್ಚುವುದೇ ಅಪ್ಪನ ಕಾಯಕ !

ಅಪಘಾತದಲ್ಲಿ ಮಗ ಪ್ರಾಣ ಕಳೆದುಕೊಂಡ ನಂತರ ರಸ್ತೆಗುಂಡಿ ಮುಚ್ಚುವುದೇ ಅಪ್ಪನ ಕಾಯಕ !

63
0
SHARE

ಮುಂಬೈ:  ಇವರ ಹೆಸರು ದಾದಾರಾವ್ ಬಿಲ್ಹೋರೆ, ಮುಂಬೈ ನಿವಾಸಿ. ಮೂರು ವರ್ಷಗಳ ಹಿಂದೆ ಇವರ ಮಗ ರಸ್ತೆಗುಂಡಿಯಿಂದಾಗಿ ಸಂಭವಿಸಿದ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದ. ಜುಲೈ 28, 2015ರಲ್ಲಿ ಬಿಲ್ಹೋರೆ ಅವರ ಮಗ 16ರ ಹರೆಯದ ಪ್ರಕಾಶ್ ಮುಂಬೈಯ ಜೋಗೇಶ್ವರಿ- ವಿಖ್ರೋಲಿ ಲಿಂಕ್ ರಸ್ತೆ (ಜೆವಿಎಲ್‍ಆರ್) ನಲ್ಲಿ ಪ್ರಯಾಣಿಸುತ್ತಿದ್ದಾಗ ಬೈಕ್ ಅಪಘಾತ ಸಂಭವಿಸಿತ್ತು.


(ಕೃಪೆ: ಎಎನ್‌ಐ ಟ್ವಿಟರ್)

ಮಗನ ಮರಣ ನಂತರ ಬಿಲ್ಹೋರೆ ಅವರು ಮುಂಬೈ ನಗರದ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಮಾಡುತ್ತಾ ಬರುತ್ತಿದ್ದಾರೆ. ಹೀಗೆ ತಮ್ಮ ಕಾರ್ಯವನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುತ್ತಿರುವ ಬಿಲ್ಹೋರೆ, 2018 ಜುಲೈ 29 ಭಾನುವಾರದ ವರೆಗೆ 556 ರಸ್ತೆ ಗುಂಡಿಗಳನ್ನು ಮುಚ್ಚಿದ್ದಾರೆ.

 


ರಸ್ತೆ ಗುಂಡಿ ಮುಚ್ಚುತ್ತಿರುವುದು (ಕೃಪೆ: ಎಎನ್‌ಐ ಟ್ವಿಟರ್)

ಈ ಬಗ್ಗೆ ಎಎನ್‍ಐ ಸುದ್ದಿಸಂಸ್ಥೆ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ನನ್ನ ಮಗ ಪ್ರಕಾಶನಿಗೆ ಆದಂತೆ ಯಾರಿಗೂ ಆಗಬಾರದು. ಇಲ್ಲಿನ ರಸ್ತೆಗಳು ಗುಂಡಿಮುಕ್ತವಾಗುವವರೆಗೆ ನಾನು ಈ ಕೆಲಸ ಮಾಡುತ್ತೇನೆ. ನಮ್ಮ ದೇಶದಲ್ಲಿ ಜನಸಂಖ್ಯೆ ಹೆಚ್ಚಿದೆ. ಇಲ್ಲಿರುವ ಜನರಲ್ಲಿ ಒಂದು ಲಕ್ಷ ಜನರು ಹೀಗೆ ರಸ್ತೆ ಗುಂಡಿ ಮುಚ್ಚುತ್ತಾ ಬಂದರೆ ಸಾಕು ರಸ್ತೆಗಳೆಲ್ಲಾ ಗುಂಡಿಮುಕ್ತವಾಗಿ ಬಿಡುತ್ತವೆ. ಜನರೇ ಈ ರೀತಿ ಗುಂಡಿ ಮುಚ್ಚುವ ಕೆಲಸ ಮಾಡಿದರೆ ಬಿಎಂಸಿ, ಎಂಎಂಆರ್‍‍ಡಿಎ ಅಧಿಕೃತರೂ ಇತ್ತ ಗಮನ ಹರಿಸುತ್ತಾರೆ ಎಂದು ಹೇಳಿದ್ದಾರೆ.

ಮುಂಗಾರು ಮಳೆ ವೇಳೆಯಲ್ಲಿ ಮುಂಬೈಯಲ್ಲಿ ರಸ್ತೆ ಗುಂಡಿಯಿಂದಾಗಿ ಆರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ತಿಂಗಳ ಆರಂಭದಲ್ಲಿ ರಾಜ್ಯದಲ್ಲಿ ರಸ್ತೆ ಗುಂಡಿಯಿಂದಾಗಿ ಸಂಭವಿಸುತ್ತಿರುವ ಅಪಘಾತದ ವಿರುದ್ಧ ಮಹಾರಾಷ್ಟ್ರ ನವನಿರ್ಮಾಣ್ ಸೇನಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.

LEAVE A REPLY

Please enter your comment!
Please enter your name here