Home ಕ್ಲಾಸಿಪೈಡ್ ವಿಜಯವಾಡದಲ್ಲಿ ಕಸ ವಿಲೇವಾರಿಗೆ ಹೊಸ ರೂಪ ತಂದ- ಎಲೆಕ್ಟ್ರಿಕ್ ರಿಕ್ಷಾಗಳದ್ದೇ ಕಾರುರ್ಬಾರ್..!

ವಿಜಯವಾಡದಲ್ಲಿ ಕಸ ವಿಲೇವಾರಿಗೆ ಹೊಸ ರೂಪ ತಂದ- ಎಲೆಕ್ಟ್ರಿಕ್ ರಿಕ್ಷಾಗಳದ್ದೇ ಕಾರುರ್ಬಾರ್..!

100
0
SHARE

ಭಾರತದ ಬಹುತೇಕ ದೊಡ್ಡ ದೊಡ್ಡ ನಗರಗಳಲ್ಲಿ ಕಸ ಸೃಷ್ಟಿ ಮಾಡಿರುವ ಸಮಸ್ಯೆ ಅಷ್ಟಿಷ್ಟಲ್ಲ. ಅದರಲ್ಲೂ ಬೆಂಗಳೂರು, ಮುಂಬೈ, ಕೊಲ್ಕತ್ತಾ, ರಾಷ್ಟ್ರರಾಜಧಾನಿ ದೆಹಲಿ, ಚೆನ್ನೈ, ಹೀಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಸಿಲಿಕಾನ್ ಸಿಟಿಯಲ್ಲಿನ ಕಸ ವಿಲೇವಾರಿ ನಡೆಸಲು ಸಾಕಷ್ಟು ಕಷ್ಟಪಡುತ್ತಿದೆ. ಬೆಂಗಳೂರಿನಲ್ಲಿ ಕಸ ಸೃಷ್ಟಿ ಮಾಡಿರುವ ಅವಾಂತರದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಜನರು ಕೂಡ ಹಸಿ ಕಸ ಹಾಗೂ ಒಣಕಸವನ್ನು ಬೇರೆ ಬೇರೆಯಾಗಿ ವಿಲೇವಾರಿ ಮಾಡುವುದು ಕೂಡ ಅಷ್ಟಕಷ್ಟೇ ಇದೆ. ಆದರೆ ನೆರೆಯ ಆಂಧ್ರ ಪ್ರದೇಶ ಕಸ ವಿಲೇವಾರಿಗೆ ಹೊಸ ಐಡಿಯಾವೊಂದನ್ನು ಮಾಡಿದೆ. ಕಸ ಸಂಗ್ರಹಣೆ ಮಾಡುವ ವಾಹನಕ್ಕೆ ಸ್ಮಾರ್ಟ್ ಮತ್ತು ಎಲೆಕ್ಟ್ರಾನಿಕ್ ಸ್ಪರ್ಶ ನೀಡಿದೆ. ಮಾಲಿನ್ಯ ರಹಿತ ಎಲೆಕ್ಟ್ರಿಕ್ ಆಟೋರಿಕ್ಷಾಗಳಿಗೆ ಹೈಡ್ರಾಲಿಕ್ ಡಿಸ್ಪೋಸಲ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ. “ಗಯಮ್ ಮೋಟಾರ್ ವರ್ಕ್ಸ್” ಅನ್ನುವ ಎಲೆಕ್ಟ್ರಿಕ್ ವಾಹನ ಉತ್ಪಾದಕ ಸ್ಟಾರ್ಟ್ ಅಪ್ ಸಂಸ್ಥೆ ಮೂಲಕ ಸರಕಾರ ಕಸವಿಲೇವಾರಿ ವಾಹವನ್ನು ಪೂರೈಕೆ ಮಾಡುತ್ತಿದೆ.

ಈಗಾಗಲೇ ನಗರ ಪ್ರದೇಶಗಳು ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕಸ ಸಂಗ್ರಹಣೆ ಹಾಗೂ ವಿಲೇವಾರಿ ಕೆಲಸ ನಡೆಯುತ್ತಿದೆ. ಆದರೆ  ಇದು ಅವೈಜ್ಞಾನಿಕವಾಗಿದ್ದು, ಹೆಚ್ಚು ಕೆಲಸಗಾರರನ್ನು ಬೇಡುತ್ತಿದೆ. ಇದು ಕಸ ಸಂಗ್ರಹಣೆ ಹಾಗೂ ವಿಲೇವಾರಿಯನ್ನು ಹೆಚ್ಚು ಕಠಿಣವಾಗಿಸಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಅಷ್ಟೇ ಅಲ್ಲ ಮನೆ ಮನೆಗೆ ಹೋಗಿ ಕಸ ಸಂಗ್ರಹಣೆ ಮಾಡುವುದು ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರಗಳಲ್ಲಿ ಕಷ್ಟಕರವಾದ ಮಾತು ಕೂಡ ಆಗಿದೆ.

“ನಮ್ಮ ನಗರದ ಕಸ ಸಂಗ್ರಹಣೆ, ವಿಲೇವಾರಿ ಮತ್ತು ನಿರ್ವಹಣೆ ಸುಲಭವಾಗುತ್ತಿದೆ. ವಿಜಯವಾಡ ಮುನಿಸಿಪಲ್ ಕಾರ್ಪೋರೇಷನ್ ಕಚೇರಿಯಲ್ಲೇ ಎಲ್ಲವನ್ನೂ ವೀಕ್ಷಣೆ ಮಾಡಬಹುದು. ಮೊಬೈಲ್ ಮತ್ತು ಕ್ಲೌಡ್ ಕನೆಕ್ಷನ್ ಮೂಲಕ ಕಸ ವಿಲೇವಾರಿ ವ್ಯವಸ್ಥೆಯನ್ನು ನಿರ್ವಹಣೆ ಮಾಡಲಾಗುತ್ತದೆ. ಎಲೆಕ್ಟ್ರಿಕ್ ವಾಹನಗಳ ಬಳಕೆ ನಮಗೆ ರಿಯಲ್ ಟೈಮ್ ಅಪ್ ಡೇಟ್ ಮಾಡಲು ಸಹಾಯಕವಾಗಿದೆ. ನಗರವನ್ನು ಸ್ವಚ್ಛವಾಗಿಸುವ ಜೊತೆಗೆ ಇಂಗಾಲದ ಡೈ ಆಕ್ಸೈಡ್ ಪ್ರಮಾಣವನ್ನು ಕಡಿಮೆ ಮಾಡಲು ಇದು ನೆರವಾಗಲಿದೆ. ”

2010ರಲ್ಲಿ ಗಯಮ್​​ ಮೋಟಾರ್ ವರ್ಕ್ಸ್ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಎಲೆಕ್ಟ್ರಿಕ್ ಬೈಕ್ ಮತ್ತು ಸ್ಮಾರ್ಟ್ ಆಟೋ ರಿಕ್ಷಾಗಳನ್ನು ಇದು ತಯಾರು ಮಾಡುತ್ತಿದೆ. ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಳಕೆ ಹಾಗೂ ಎಲೆಕ್ಟ್ರಿಕ್ ವಾಹನಗಳನ್ನು ಬಳಕೆ ಮಾಡುವಂತೆ ಉತ್ತೇಜಿಸುವ ಕನಸನ್ನು ಗಯಮ್​  ಸಂಸ್ಥೆ ಹೊಂದಿದೆ. ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಕಾರುಗಳನ್ನು ಮೊದಲ ಬಾರಿ ಭಾರತದಲ್ಲಿ ಪರಿಚಯಿಸಿದ ಕೀರ್ತಿ ಕೂಡ ಈ ಗಯಮ್​ ಕಂಪನಿಗಿದೆ.(ಸಂಸ್ಥೆ)

ವಿಜಯವಾಡದಲ್ಲಿ ಕಸವಿಲೇವಾರಿಗೆ ಅಳವಡಿಸಿಕೊಂಡಿರುವ ಹೊಸ ತಂತ್ರಜ್ಞಾನದಿಂದ, ಒಂದು ಕಡೆಯಲ್ಲಿ ಕುಳಿತು, ಕಸ ವಿಲೇವಾರಿ ಮಾಡುವ ವಾಹನದ ಜಾತಕವನ್ನು ತಿಳಿಯಬಹುದು. ವೇಸ್ಟ್ ಪಿಕ್-ಅಪ್ ಪಾಯಿಂಟ್, ವಾಹನ ಚಲಿಸಿಕೊಂಡು ಹೋಗುತ್ತಿರುವ ಮಾರ್ಗ ಸೇರಿದಂತೆ ಎಲ್ಲವನ್ನೂ ಕೂಡ ಟ್ರ್ಯಾಕ್ ಮಾಡಬಹುದು. ಇದು ಕೆಲಸದ ಕ್ರೀಯಾಶೀಲತೆಯನ್ನು ಹೆಚ್ಚಿಸುವುದರ ಜೊತೆಗೆ ನಷ್ಟವನ್ನು ಕಡಿಮೆ ಮಾಡಲಿದೆ. ಇಲ್ಲಿ ತನಕ ಡಿಸೇಲ್ ಆಟೋಗಳನ್ನು ಕಸ ಸಂಗ್ರಹಣೆಗೆ ಬಳಸಿಕೊಳ್ಳಲಾಗುತ್ತಿತ್ತು. ಈಗ ಎಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ಈ ಕೆಲಸ ಸಿಕ್ಕಿದೆ. 5 ವರ್ಷಗಳಲ್ಲಿ ಒಂದು ಡಿಸೇಲ್ ಆಟೋ ರಿಕ್ಷಾ ಸುಮಾರು 35 ಟನ್ ಕಾರ್ಬನ್ ಅನ್ನು ಹೊರ ಹಾಕುತ್ತಿತ್ತು. ವಿಜಯವಾಡ ಮುನಿಸಿಪಲ್ ಕಾರ್ಪೋರೇಷನ್ ನಲ್ಲಿ ಕಸ ವಿಲೇವಾರಿ ಮಾಡಲು ಸುಮಾರು 5000 ಡಿಸೇಲ್ ಆಟೋಗಳನ್ನು ಬಳಸಿಕೊಳ್ಳಲಾಗುತ್ತಿತ್ತು. ಈಗ ಎಲೆಕ್ಟ್ರಿಕ್ ಆಟೋ ರಿಕ್ಷಾಗಳ ಬಳಕೆಯಿಂದ ಸುಮಾರು 2,00,000ಟನ್ ಕಾರ್ಬನ್ ಹೊರಹಾಕುವಿಕೆಯನ್ನು ತಡೆಯಬಹುದಾಗಿದೆ. ಇದರಿಂದ ಪರಿಸರಕ್ಕೂ ಯಾವುದೇ ಹಾನಿ ಉಂಟಾಗುವುದಿಲ್ಲ.

ಈ ನಡುವೆ ಡಿಸೇಲ್ ಆಟೋ ರಿಕ್ಷಾಗಳಿಗೆ ಪ್ರತೀ ಕಿಲೋಮೀಟರ್ ಗೆ ಸುಮಾರು 3.50 ರೂಪಾಯಿಗಳನ್ನು ನೀಡಬೇಕಿತ್ತು.  ಆದರೆ ಎಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ಪ್ರತೀ ಕಿಲೋಮೀಟರ್ ಗೆ ಕೇವಲ 50 ಪೈಸೆ ಖರ್ಚು ಮಾತ್ರ ಆಗುತ್ತದೆ. ಹೀಗಾಗಿ ಮೈಂಟೇನೆನ್ಸ್ ಖರ್ಚು ಕೂಡ ಕಡಿಮೆ ಆಗಲಿದೆ ಎನ್ನುತ್ತಾರೆ.

ಒಟ್ಟಿನಲ್ಲಿ ವಿಜಯವಾಡ ಮುನಿಸಿಪಲ್ ಕಾರ್ಪೋರೇಷನ್ ಕಸ ವಿಲೇವಾರಿ ವಿಚಾರದಲ್ಲಿ ದೊಡ್ಡ ಹೆಜ್ಜೆಯನ್ನು ಇಟ್ಟಿದೆ. ಇದರ ಮುಂದಿನ ಯಶಸ್ಸು ಎಲ್ಲಾ ನಗರಗಳಿಗೂ ಹಾಗೂ ಮಹಾನಗರ ಪಾಲಿಕೆಗಳ ಕಸ ವಿಲೇವಾರಿ ಕಷ್ಟಕ್ಕೆ ಉತ್ತರವಾಗಲಿದೆ ಅನ್ನುವುದು ಎಲ್ಲರ ಅಭಿಮತ ಒಂದೇ ಆಗಿದೆ.

LEAVE A REPLY

Please enter your comment!
Please enter your name here