Home ಕ್ಲಾಸಿಪೈಡ್ ಬುದ್ಧನ ಮುದ್ರೆ

ಬುದ್ಧನ ಮುದ್ರೆ

157
0
SHARE

ಬುದ್ಧನ ಮುದ್ರೆ: ಬುದ್ಧನ ಮಹಾನಿರ್ವಾಣದ ನಂತರ ಬೌದ್ಧ ಧರ್ಮವು ನಿರಂತರವಾಗಿ ಪರಿಷ್ಕರಣೆಗೊಳಗಾಗುತ್ತ. ಪರಿವರ್ತನೆಗೊಳಗಾಗುತ್ತಾ ಹಲವು ಕವಲುಗಳಾಗಿ ಬೆಳೆದಿದೆ.

ಈ ಧರ್ಮಚಕ್ರದ ತಿರುಗುವಿಕೆಯಲ್ಲಿ ಹೀನಯಾನ, ಮಹಾಯಾನ ಮತ್ತು ವಜ್ರಯಾನ ಮೂರು ತಿರುವುಗಳಿವೆ. ಜತೆಗೆ ಮತ್ತಷ್ಟು ಒಳ ಕವಲುಗಳು. ಬೌದ್ಧಧರ್ಮದ ಈ ಎಲ್ಲ ಕವಲುಗಳಲ್ಲಿ ತಾಂತ್ರಿಕ ಅಂಶಗಳನ್ನು ಒಳಗೊಂಡ ವಜ್ರಯಾನವು ಹೆಚ್ಚು ಜನಪ್ರೀಯ.
ಮೂರ್ತಿಪೂಜೆಯ ವಜ್ರಯಾನ.

ವಜ್ರಯಾನದ ಪ್ರಮುಖ ಅಂಶವೇ ಮಂತ್ರ ಮತ್ತು ಮೂರ್ತಿಪೂಜೆ. ಹೀನಯಾನ ಅಥವಾ ತೇರವದ ಧ್ಯಾನಕ್ಕೆ ಪ್ರಾಮುಖ್ಯತೆ ಕೊಟ್ಟರೆ, ವಜ್ರಯಾನದಲ್ಲಿ ಮೂರ್ತಿಪೂಜೆಯೇ ಭಕ್ತಿಮಾರ್ಗದ ಮಹಾಸಾಧನ. ಸಾಧಕರಿಗೆ ಪೂಜಿಸಲು ಅವರವರ ಕಲ್ಪನೆಗೆ ತಕ್ಕಂತೆ ಬಿಂಬಗಳು ಬೇಕೆನಿಸಿದಾಗ ಬುದ್ಧನ ಹಲವು ರೂಪಗಳು ಅವಿಷ್ಕಾರಗೊಂಡವು. ಆದಿಬುದ್ಧ ಮಾತ್ರ ಇದ್ದದ್ದು ನಿಧಾನಕ್ಕೆ ಸಹಸ್ರಾರು ರೂಪಗಳವರೆಗೆ ಬಂದು ಮುಟ್ಟಿತು! ಆದಿಬುದ್ಧನಿಂದ ವೈರೋಚನ, ಅಕ್ಷೋಭ್ಯ, ರತ್ನ ಸಂಭವ, ಅಮಿತಾಭ ಹಾಗೂ ಅಮೋಘಸಿದ್ಧಿ ಎಂಬ ಐವರು ಧ್ಯಾನಿಬುದ್ಧರು ಹುಟ್ಟಿಕೊಂಡರು.

ಆ ಐವರು ಧ್ಯಾನಿ ಬುದ್ಧರಿಗೆ ಸೇರಿದ ಗುಂಪುಗಳಲ್ಲಿ ಸಾವಿರಾರು ಬೋಧಿಸತ್ವರು ಸೃಷ್ಟಿಗೊಂಡರು. ಬೋಧಿಸತ್ವ ಎಂಬ ಹೆಸರಿನ ಈ ರೂಪಗಳು ಸ್ವತಃ ಬುದ್ಧನನ್ನು ಪ್ರತಿನಿಧಿಸುವುದಿಲ್ಲ, ಆದರೆ ಅವರೆಲ್ಲ ಬುದ್ಧನ ಅಂಶಗಳಿರುವ ದೇವತೆಗಳು. ತಾಂತ್ರಿಕ ಶೈವ ಧರ್ಮದ ಪ್ರಭಾವದಲ್ಲಿ ಹುಟ್ಟಿಕೊಂಡ ವಜ್ರಯಾನದ ಈ ದೇವತೆಗಳಲ್ಲಿ ಕೆಲವು ಸೌಮ್ಯ ರೂಪದವರಾದರೆ ಹೆಚ್ಚಿನವು ಉಗ್ರರೂಪದವು. ಸೌಮ್ಯ ಅಥವಾ ಉಗ್ರ ರೂಪಕ್ಕೆ ಕಾರಣಗಳಿವೆ. ಅದೇನೇ ಇದ್ದರೂ, ಈ ಎಲ್ಲ ಆಕಾರಗಳಲ್ಲಿ ಬುದ್ಧ ಮತ್ತು ಧ್ಯಾನಿಬುದ್ಧರಿಗೆ ಹೆಚ್ಚಿನ ಪ್ರಾಧಾನ್ಯತೆ ಇದೆ. ಇವಕ್ಕೆ ಸಂಬಧಿಸಿದ ಪ್ರತಿಮಾಶಾಸ್ತ್ರದಲ್ಲಿ ಪ್ರತಿ ಕಲ್ಪನೆಗೂ ನಿರ್ದಿಷ್ಟ ರೂಪಗಳಿರುತ್ತವೆ. ಬೌದ್ಧ ಶಿಲ್ಪಶಾಸ್ತ್ರದಲ್ಲಿ ಅಂಗಭಂಗಿಗಳು ನಿಗದಿತವಾಗಿದ್ದರೆ ಬುದ್ಧನಿಗೆ ಸಂಬಂಧಿಸಿದ ವರ್ಣಚಿತ್ರಗಳಲ್ಲಿ ನಿರ್ದಿಷ್ಟ ಬಣ್ಣವನ್ನೂ ಸೂಚಿಸಲಾಗಿರುತ್ತದೆ.

ಬುದ್ಧನ ಕಾಲದಲ್ಲಿ ಬುದ್ಧನ ಯಾವುದೇ ವಿಗ್ರಹವೂ ನಿರ್ಮಾಣಗೊಳ್ಳಲಿಲ್ಲ. ಬುದ್ಧನ ಪರಿನಿರ್ವಾಣದ ನಂತರ ಸುಮಾರು ಇನ್ನೂರು ವರ್ಷಗಳಾದ ಮೇಲೆ ಬುದ್ಧನ ಶಿಲ್ಪಗಳ ನಿರ್ಮಾಣ ಆರಂಭವಾಯಿತು ಎನ್ನುವುದು ಇತಿಹಾಸಕಾರರ ಅಭಿಮತ. ಅದೇ ಸಮಯದಲ್ಲಿ ಬುದ್ಧನ ವಿಗ್ರಹ ಎಂದರೆ ಹೀಗೆಯೇ ಇರಬೇಕು ಎಂದು ಸ್ಪಷ್ಟವಾಗಿ ನಿರೂಪಿಸಲು ಹಲವು ಭಂಗಿಗಳೂ, ಸಂಕೇತಗಳೂ ರೂಪಿತವಾದವು. ನಮ್ಮ ಹಿಂದು ಶಿಲ್ಪ ಶಾಸ್ತ್ರದಲ್ಲಿ ತಿಲಕ, ರುದ್ರಾಕ್ಷಿ, ವಿಭುತಿ, ಓಂ, ಸ್ವಸ್ತಿಕ್ ಇತ್ಯಾದಿ ಇರುವಂತೆ ಬೌದ್ಧ ಪ್ರತಿಮಾ ಶಾಸ್ತ್ರದಲ್ಲಿ ಪದ್ಮ, ಪದ್ಮಾಸನ, ರತ್ನಕುಂಭ, ಧರ್ಮಚಕ್ರ ಇತ್ಯಾದಿಗಳಿವೆ.

ನಮ್ಮ ದೇವತೆಗಳ ವಾಹನಗಳಂತೆಯೇ ಬುದ್ಧನಿಗೂ ಆನೆ, ಸಿಂಹ, ನವಿಲು ಮೊದಲಾದ ವಾಹನಗಳನ್ನು ಸಂಕೇತಗಳಾಗಿ ನೀಡಲಾಗಿದೆ. ಬುದ್ಧನ ದೇಹಪ್ರಮಾಣವನ್ನು ಸ್ಪಷ್ಟವಾಗಿ ಹೇಳಲಾಗಿದೆ. ಇಳಿಬಿದ್ದ ಉದ್ದವಾದ ಕಿವಿಗಳು, ಆಜಾನು ಬಾಹುಗಳು, ವಿಶಾಲವಾದ ಭುಜ ಮತ್ತು ಎದೆ, ಗುಂಗುರು ಕೂದಲು, ಚಪ್ಪಟೆ ಪಾದ, ಎತ್ತರವಾದ ನಿಲುವು, ಅದರ ಮೇಲಿನಿಂದ ಇಳಿದು ಬಂದ ತೆಳುವಾದ ವಸ್ತ್ರ- ಇವೆಲ್ಲ ಬುದ್ಧನ ಪ್ರತಿಮಾಶಾಸ್ತ್ರದ ಲಕ್ಷಣಗಳು. ಅವುಗಳ ಜೊತೆಯಲ್ಲಿ ಮುದ್ರೆಗಳು ಸಹ ಪ್ರಮುಖ ಸ್ಥಾನವನ್ನು ಪಡೆದಿವೆ.

ಮುದ್ರೆಗಳು ಬುದ್ಧನಿಗಾಗಿಯೇ ಹುಟ್ಟಿಕೊಂಡದ್ದಲ್ಲ. ಬುದ್ಧನಿಗಿಂತಲೂ ಎಷ್ಟೋ ಮೊದಲಿನಿಂದಲೂ ಮುದ್ರೆಗಳ ಕಲ್ಪನೆ ಇತ್ತು. ಮುದ್ರಾ ಅಥವಾ ಮುದ್ರೆ ಎಂಬುದಕ್ಕೆ ಮೊಹರು, ಗುರುತು, ಭಾವ ಇತ್ಯಾದಿ ಅರ್ಥಗಳಿವೆಯಾದರೂ ನಾಟ್ಯ ಶಾಸ್ತ್ರದಲ್ಲಿ ಮತ್ತು ಶಿಲ್ಪಶಾಸ್ತ್ರದಲ್ಲಿ ಮುದ್ರೆ ಎಂದರೆ ಭಾವ ಎಂದೇ ಅರ್ಥ. ಭರತನಾಟ್ಯ, ಕಥಕ್ಕಳಿ ಅಥವ ಒಡಿಸ್ಸಿ ಮೊದಲಾದ ನೃತ್ಯಗಳ ಕಲಾವಿದರು ಕರವಿನ್ಯಾಸಗಳನ್ನು ಪ್ರದರ್ಶಿಸುವುದನ್ನು ಗಮನಿಸಬಹುದು. ಅವುಗಳನ್ನೆ ಮುದ್ರೆ ಎಂದು ಕರೆಯುತ್ತಾರೆ.

ಹಸ್ತ ಮತ್ತು ಬೆರುಳುಗಳ ಸ್ಥಾನ ಬದಲಾವಣೆಯಿಂದ ಮುದ್ರೆಗಳನ್ನು ಸಂಯೋಜಿಸಲಾಗುತ್ತದೆ. ಮಾತಿನಲ್ಲಿ ಸಂವಹನೆ ಮಾಡಲಾಗದ್ದನ್ನು ಮುದ್ರೆಗಳು ಸಾಂಕೇತಿಕವಾಗಿ ಹೇಳುತ್ತವೆ ಎನ್ನುತ್ತಾರೆ. ನಮ್ಮ ದೇಹದ ಎಲ್ಲ ಚಲನೆಗಳೂ, ಅಂಗಭಂಗಿಗಳೂ ಒಂದಿಲ್ಲೊಂದು ಮುದ್ರೆಗಳೇ. ಈ ಮುದ್ರೆಗಳು ನಮ್ಮ ನಡುವಳಿಕೆಯನ್ನೂ ವ್ಯಕ್ತಿತ್ವವನ್ನೂ ನಿರ್ಧರಿಸುತ್ತವೆ ಎಂದು ದೇಹಶಾಸ್ತ್ರಜ್ಞರು ಹೇಳುತ್ತಾರೆ.

ಮುದ್ರೆಗಳು
ಬೆರಳುಗಳ ಸಂಯೋಜನೆ ಎನ್ನುವಾಗ ಇಲ್ಲಿ ಬೆರಳುಗಳು ಪ್ರಮುಖವಾಗಿ ಪರಿಗಣಿತವಾಗುತ್ತವೆ. ನಮ್ಮ ಐದೂ ಬೆರಳುಗಳು ಪಂಚಭೂತಗಳಾದ ಆಕಾಶ, ಗಾಳಿ, ಬೆಳಕು, ನೀರು ಮತ್ತು ಮಣ್ಣುಗಳನ್ನು ಪ್ರತಿನಿಧಿಸುತ್ತವೆ. ಹಾಗೆಯೇ ಪ್ರತಿ ಮುದ್ರೆಯಲ್ಲೂ ಬೆರಳುಗಳ ಸಂಯೋಜನೆ ಅಥವಾ ಸ್ಪರ್ಶ ಸ್ಥಿತಿ ಬೇರೆಯೇ ಆಗಿರುವುದರಿಂದ ಮುದ್ರೆಗಳು ಪಂಚಭೂತಗಳ ವಿವಿಧ ಶಕ್ತಿಗಳ ವಿಭಿನ್ನ ಸಂಯುಕ್ತ ಸ್ಥಿತಿಯನ್ನು ವಿವರಿಸುತ್ತವೆ.

ಆದಿಬುದ್ಧ ಆಗಲಿ, ವಜ್ರಯಾನದ ಧ್ಯಾನಿಬುದ್ಧರು ಅಥವಾ ಇತರ ದೇವತೆಗಳಾಗಲಿ, ಯಾವುದಾದರೊಂದು ನಿಗದಿತ ಮುದ್ರೆಯಲ್ಲಿಯೇ ಇರುತ್ತಾರೆ. ಜೊತೆಗೆ ಶಿಲ್ಪಶಾಸ್ತ್ರದಲ್ಲಿರುವಂತೆ ಕೆಲವು ವಸ್ತುಗಳನ್ನು ಕೈನಲ್ಲಿ ಹಿಡಿದಿರುತ್ತಾರೆ. ಎಡ-ಬಲಗಳಲ್ಲಿ ಆನೆ, ನವಿಲು ಮೊದಲಾದ ಪ್ರಾಣಿಗಳು ಶಾಕ್ಯಮುನಿಗಳು ಅಥವಾ ಬೋಧಿಸತ್ವರು ಇರುತ್ತಾರೆ. ವಜ್ರಯಾನದಲ್ಲಿ ಬುದ್ಧನ ಬಲಗೈಗೆ ಹೆಚ್ಚಿನ ಮಹತ್ವವಿದೆ. ಬಲಗೈ ಕೌಶಲ್ಯ ಮತ್ತು ಕ್ರಿಯೆಯನ್ನು ಪ್ರತಿನಿಧಿಸುತ್ತದೆ, ಹಾಗೂ ಎಡಗೈ ಬುದ್ಧಿ ಮತ್ತು ಶೂನ್ಯವನ್ನು ಪ್ರತಿನಿಧಿಸುತ್ತದೆ.

ವಿಗ್ರಹಗಳ ನಿರ್ಮಾಣ ಕಾಲದಲ್ಲಿ ಬಲಗೈನ ಮುದ್ರೆಗಳಿಗೆ ಹೆಚ್ಚು ಪ್ರಾಮುಖ್ಯತೆ ಇರುತ್ತದೆ. ಬುದ್ಧನ ಬಿಂಬಗಳ ನಿರೂಪಣೆಯಲ್ಲಿ ಮಂಡಲ, ಆಸನ, ಕಿರೀಟ, ಪ್ರಭಾವಳಿ, ಸಹವರ್ತಿಗಳು ಮತ್ತು ವಸ್ತುಗಳಿಗೆ ಮಹತ್ವವಿದೆ. ಪ್ರತಿಯೊಬ್ಬ ಬುದ್ಧನ ಗುರುತು ಪತ್ತೆಯಲ್ಲಿ ಈ ಆರು ಅಂಶಗಳು ನಿರ್ಣಾಯಕ ಆಗಿರುತ್ತವಾದರೂ ಅವುಗಳಿಗಿರುವಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ಪ್ರಾಮುಖ್ಯತೆ ಈ ಮುದ್ರೆಗಳಿಗಿವೆ.

ಬುದ್ಧನ ಆಕೃತಿಗಳಲ್ಲಿ ಮುದ್ರೆಗಳು ಕಾಣಿಸಿಕೊಂಡದ್ದು 5ನೆ ಶತಮಾನದಿಂದೀಚೆಗೆ, ಅದೂ ವಜ್ರಯಾನದ ಬೆಳವಣಿಗೆಯ ನಂತರ ಎಂಬ ಅಭಿಪ್ರಾಯವಿದೆ. ಅದರಲ್ಲೂ ಚನ ಸೂತ್ರದ ನಂತರ ಬುದ್ಧನ ಶಿಲ್ಪಗಳಲ್ಲಿ ಮುದ್ರೆಗಳಿಗೆ ಮಹತ್ವ ಬಂದಿತು. ಮಹಾವೈರೋಚನ ಸೂತ್ರದಲ್ಲಿ ಒಟ್ಟು 130 ಮುದ್ರೆಗಳ ಕುರಿತಂತೆ ವಿವರಗಳಿವೆಯಂತೆ. ಅದರಲ್ಲಿ ಕೇವಲ 30ರಷ್ಟು ಮಾತ್ರಾ ಬುದ್ಧನಿಗೆ ಅನ್ವಯವಾಗುತ್ತವೆ. ಉಳಿದದ್ದು ಇತರ ದೇವತಾ ಬಿಂಬಗಳಿಗೆ ಅನ್ವಯಿಸಲಾಗಿದೆ.

ಮಹಾವೈರೊವಜ್ರಯಾನ ಹೇಳುವ ಮುದ್ರೆಗಳು 130, ಅದರಲ್ಲಿ ಬುದ್ಧನಿಗೆ ಮೀಸಲಾದದ್ದು 30. ಹೀಗಿದ್ದರೂ ಆ ಎಲ್ಲ ಮುದ್ರೆಗಳೂ ಬುದ್ಧನ ವಿಗ್ರಹಗಳಲ್ಲಿ ಹೆಚ್ಚಾಗಿ ಕಂಡುಬರುವುದಿಲ್ಲ. ಬುದ್ಧನ ಜೀವನದ ಮಹತ್ವದ ಹಂತಗಳಲ್ಲಿ ಬುದ್ಧ ಉಪಯೋಗಿಸಿದ 6 ಮುದ್ರೆಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಅವೆಂದರೆ ಧ್ಯಾನ ಮುದ್ರೆ, ವಿತರ್ಕ ಮುದ್ರೆ, ಧರ್ಮಚಕ್ರ ಮುದ್ರೆ, ಭೂಮಿಸ್ಪರ್ಶ ಮುದ್ರೆ, ವರದ ಮುದ್ರೆ ಹಾಗೂ ಅಭಯ ಮುದ್ರೆ.

ಈ ಎಲ್ಲ ಮುದ್ರೆಗಳನ್ನೂ ತನ್ನ ತಪಸ್ಸಿನ ಸಮಯದಲ್ಲಿ, ಜ್ಞಾನೋದಯದ ಸಂದರ್ಭದಲ್ಲಿ, ಶತ್ರುಗಳು ದ್ವೇಷದಿಂದ ಆನೆಯ ಮೂಲಕ ದಾಳಿ ನಡೆಸಿದಾಗ ಹಾಗೂ ಧರ್ಮ ಬೋಧನೆಯ ಸಮಯದಲ್ಲಿ ಬುದ್ಧ ಉಪಯೋಗಿಸಿದ್ದರಿಂದ ಹಾಗೂ ಈ ಮುದ್ರೆಗಳು ಬುದ್ಧನ ಜೀವಿತದ ಪ್ರಮುಖ ಘಟ್ಟಗಳನ್ನು ಪ್ರತಿನಿಧಿಸುತ್ತವೆ ಎಂಬ ಕಾರಣದಿಂದ ಇವುಗಳಿಗೆ ಮಹತ್ವ ಬಂದಿದೆ.


ಧ್ಯಾನ ಮುದ್ರೆ: ಬುದ್ಧನು ಬೋಧಿವೃಕ್ಷದ ಕೆಳಗೆ ತಪಸ್ಸಿಗೆ ಕುಳಿತಾಗ ಉಪಯೋಗಿಸಿದ ಮುದ್ರೆಯ ಧ್ಯಾನ ಮುದ್ರೆ. ಈ ಮುದ್ರಾಧಾರಣೆ ಮಾಡುವಾಗ ಉದರದ ಎದುರು ಎರಡೂ ಹಸ್ತಗಳನ್ನು ಸಮಾನಾಂತರವಾಗಿ ಇರಿಸಲಾಗಿರುತ್ತದೆ. ಧ್ಯಾನ ಮುದ್ರೆಯ ಮತ್ತೊಂದು ವಿಧಾನದಲ್ಲಿ ಎರಡೂ ಹೆಬ್ಬೆರಳುಗಳು ತೋರುಬೆರಳನ್ನು ಸ್ಪರ್ಷಿಸುವಂತಿದ್ದು ಆ ಕಾರಣದಿಂದ ಆ ಎರಡು ಬೆರಳುಗಳ ನಡುವಿನಲ್ಲಿ ವೃತ್ತಾಕಾರವೊಂದು ಏರ್ಪಡುತ್ತದೆ. ಅಲ್ಲಿ ಸೃಷ್ಟಿಯಾಗುವ ಮೂರು ಕೋನಗಳು ಕ್ರಮವಾಗಿ ಬುದ್ಧನ, ಧರ್ಮದ, ಹಾಗೂ ಸಂಘದ ಸಂಕೇತವೆಂದು ತಿಳಿಯಲಾಗುತ್ತದೆ.

ಧರ್ಮಚಕ್ರ ಮುದ್ರೆ: ಈ ಮುದ್ರೆಯಲ್ಲಿ ಹೆಬ್ಬೆರಳು ಮತ್ತು ತೋರುಬೆರಳು ಸೇರಿ ವೃತ್ತಾಕಾರವನ್ನು ನಿರ್ಮಿಸುತ್ತವೆ. ಉಳಿದ ಮೂರು ಬೆರಳುಗಳು ನೇರವಾಗಿದ್ದು ಬಲ ಹಸ್ತದ ಮೂರು ಬೆರಳುಗಳು ಬುದ್ಧನ ಅನುಯಾಯಿಗಳನ್ನೂ, ಸಾಧಕರನ್ನೂ ಮತ್ತು ಮಹಾಯಾನವನ್ನೂ ಸೂಚಿಸಿದರೆ ಎಡ ಹಸ್ತದ ಮೂರು ಬೆರಳುಗಳು ಬುದ್ಧನನ್ನು, ಧರ್ಮವನ್ನೂ ಹಾಗೂ ಸಂಘವನ್ನು ಸಾಂಕೇತಿಕವಾಗಿ ಸೂಚಿಸುತ್ತವೆ.

ಸಾರಾನಾಥದ ಬೋಧಿವೃಕ್ಷದ ಕೆಳಗೆ ತಪಸ್ಸು ನಡೆಸಿದ ಬುದ್ಧ ಜ್ಞಾನೋದಯವಾದಾಗ ಕಣ್ತೆರೆದು ತಾನು ಗಳಿಸಿದ ಜ್ಞಾನವನ್ನು ತನ್ನೆದುರಿದ್ದ ಅನುಯಾಯಿಗಳಿಗೆ ಮೊದಲ ಬಾರಿಗೆ ಬೋಧಿಸಿದಾಗ ಈ ಮುದ್ರೆಯನ್ನು ಉಪಯೋಗಿಸಿದ್ದನಂತೆ. ಈ ಭಂಗಿಯಲ್ಲಿ ಎರಡೂ ಹಸ್ತಗಳನ್ನು ಹೃದಯದ ನೇರದಲ್ಲಿ ಹಿಡಿದಿರುವದರಿಂದ ಬುದ್ಧನ ಬೋಧನೆಗಳು ಆತನ ಹೃದಯದಿಂದಲೇ ಪ್ರವಹಿಸುತ್ತವೆ ಎಂಬುದರ ಸಂಕೇತ ಎನ್ನುತ್ತಾರೆ.

ಬುದ್ಧ ತನ್ನ ಬೋಧನೆಯನ್ನು ಮೊದಲ ಬಾರಿಗೆ ಆರಂಭಿಸಿದಾಗ ಈ ಮುದ್ರೆಯನ್ನು ಉಪಯೋಗಿಸಿದ್ದರಿಂದ ಈ ಮುದ್ರೆಗೆ ಬೌದ್ಧ ಧರ್ಮದಲ್ಲಿ ಮಹತ್ವವಿದೆ. ಇಲ್ಲಿಯೂ ಹೆಬ್ಬೆರಳು ಮತ್ತು ತೋರುಬೆರಳು ಒಂದನ್ನೊಂದು ಸ್ಪರ್ಶಿಸುವ ಮೂಲಕ ವೃತ್ತವೊಂದನ್ನು ಸೃಷ್ಟಿಸುತ್ತವೆ. ಇಲ್ಲಿ ಹೆಬ್ಬೆರಳು ಹಾಗೂ ತೋರುಬೆರಳಿನ ಸ್ಪರ್ಶವನ್ನು ಬುದ್ಧಿ ಹಾಗೂ ಮಾರ್ಗದ ಸಂಯೋಜನೆ ಎಂದು ಭಾವಿಸಲಾಗುತ್ತದೆ. ಮತ್ತು ಆ ಸಂಯೋಜನೆಯಲ್ಲಿ ಸೃಷ್ಟಿಯಾದ ವೃತ್ತಾಕಾರವು ಧರ್ಮಚಕ್ರ ಎನ್ನಿಸಿಕೊಳ್ಳುತ್ತದೆ. ಬುದ್ಧನ ಮೊದಲ ಬೋಧನೆಯ ಕಾಲದಿಂದ ಧರ್ಮಚಕ್ರದ ತಿರುಗುವಿಕೆ ಆರಂಭವಾಯಿತೆಂದು ತಿಳಿಯುವದರಿಂದ ಈ ಮುದ್ರೆಗೆ ಧರ್ಮಚಕ್ರ ಮುದ್ರೆ ಎನ್ನಲಾಗುತ್ತದೆ.

ವಿತರ್ಕ ಮುದ್ರೆ:
ಬುದ್ಧ ತನ್ನ ತಪಸ್ಸಿನಿಂದ ಅಪಾರವಾದ ಜ್ಞಾನವನ್ನು ಗಳಿಸಿಕೊಂಡ ನಂತರ ತನ್ನ ಉಳಿದ ಜೀವಿತ ಕಾಲವನ್ನು ಧರ್ಮ ಬೋಧನೆಗೆಂದೇ ಮೀಸಲಾಗಿರಿಸಿದ್ದ. ಧರ್ಮ ಬೋಧನೆಯ ಕಾಲದ ನಿರಂತರ ಸಂಚಾರದಲ್ಲಿ ಆತ ಬೋಧನೆಯ ಜೊತೆ ಜೊತೆಯಲ್ಲೆ ಧರ್ಮ ಮೀಮಾಂಸೆ ಹಾಗೂ ತರ್ಕಗಳಲ್ಲೂ ಭಾಗವಹಿಸಬೇಕಾಗಿತ್ತು. ಹಾಗೆ ಧರ್ಮ ಬೋಧನೆ ಮತ್ತು ತರ್ಕದ ಸಮಯದಲ್ಲಿ ಬುದ್ಧನ ಹಸ್ತ ಈ ರೀತಿಯಲ್ಲಿ ಇರುತ್ತಿದ್ದುದರಿಂದ ಇದಕ್ಕೆ ವಿತರ್ಕ ಮುದ್ರೆ ಎಂದು ಹೆಸರು ಬಂದಿದೆ.

ಭೂಮಿ ಸ್ಪರ್ಶ ಮುದ್ರೆ:
ದೀರ್ಘ ತಪಸ್ಸಿನ ನಂತರ ಸತ್ಯದ ಸಾಕ್ಷಾತ್ಕಾರವಾದ ಕ್ಷಣದ ಸಾಕ್ಷಿಯಾಗಿ ನಿಲ್ಲಲು ಬುದ್ಧನು ಭೂಮಿಯನ್ನು ಅಹ್ವಾನಿಸಿದಾಗ ಈ ಮುದ್ರಾ ಧಾರಣೆ ಮಾಡಿದ್ದನಂತೆ. ಮತ್ತೊಂದು ಹೇಳಿಕೆಯ ಪ್ರಕಾರ ಎಲ್ಲ ಮಾನವನನ್ನು ಕಾಡುವ ಎಲ್ಲ ರೀತಿಯ ಮೋಹಕ್ಕೆ ಕಾರಣನಾದ ಮಾರ ಎಂಬ ರಾಕ್ಷಸನನ್ನು ಗೆದ್ದಾಗ ಅದಕ್ಕೆ ಸಾಕ್ಷಿಯಾಗಿ ನಿಲ್ಲಲು ಭೂಮಿಯನ್ನು ಆಹ್ವಾನಿಸಲು ಬುದ್ಧ ಈ ಮುದ್ರಾಧಾರಣೆ ಮಾಡಿದ್ದನಂತೆ.

ವರದ ಮುದ್ರೆ:
ಈ ಮುದ್ರೆಯಲ್ಲಿ ಎಡಗೈ ದಾನ ಕೊಡುವ ಭಂಗಿಯಲ್ಲಿರುತ್ತದೆ. ಮತ್ತೊಂದು ಕೈ ನೇರವಾಗಿ ಕೆಳಗಿಳಿದಿರುತ್ತದೆ. ಅಥವಾ ವರದ ಮುದ್ರೆಯ ಜೊತೆಯಲ್ಲಿ ಅಭಯ ಮುದ್ರೆಯೂ ಜೊತೆಯಾಗಿರಲೂಬಹುದು. ದಾನ ಕೊಡುವ ಭಂಗಿಯಲ್ಲಿರುವ ಹಸ್ತದಲ್ಲಿರುವ ಬೆರಳುಗಳು ಕ್ರಮವಾಗಿ ಧ್ಯಾನ, ಔದಾರ್ಯ, ತಾಳ್ಮೆ, ಶ್ರಮ ಮತ್ತು ಧರ್ಮವನ್ನು ಪ್ರತಿನಿಧಿಸುತ್ತವೆ.

ಅಭಯ ಮುದ್ರೆ:
ಸಂಸಾರದ ಜಂಜಾಟದಲ್ಲಿ ಸಿಲುಕಿ, ಮೋಹಗಳಿಗೆ ಬಲಿಯಾಗಿ ನರಳುತ್ತ ರೋದಿಸುವ ಜೀವಿಗಳಿಗೆ ಅಭಯ ನೀಡಲು, ನೊಂದ ಮನಸ್ಸಿಗೆ ಸಾಂತ್ವನ ನೀಡಲು ಈ ಮುದ್ರೆಯನ್ನು ಬುದ್ಧ ಬಳಸುತ್ತಿದ್ದನಂತೆ. ಆದರೆ ಮೊದಲ ಬಾರಿಗೆ ಈ ಮುದ್ರಾಧಾರಣೆ ಮಾಡಿದ್ದಕ್ಕೆ ಒಂದು ಕಥೆಯೂ ಇದೆ. ಬುದ್ಧನ ಜನಪ್ರಿಯತೆಯನ್ನು ಕಂಡು ಕರುಬಿದ ದೇವದತ್ತ ಮತ್ತಿತರ ಶತ್ರುಗಳು ಬುದ್ಧನನ್ನು ಕೊಲ್ಲಲ್ಲು ಕೆರಳಿದ ಆನೆಯೊಂದನ್ನು ಧರಿಸಿದ್ದನಂತೆ.

ಬುದ್ಧನ ಸೌಮ್ಯತೆಯ ಎದುರು ಆ ಕೆರಳಿದ ಆನೆ ಸಹಾ ಶಾಂತವಾಗಿ ಸುಮ್ಮನಾಯಿತಂತೆ. ಈ ಆರು ಮುದ್ರೆಗಳಲ್ಲದೆ ಅಂಜಲಿ ಮುದ್ರೆ, ಉತ್ತರಾಬೋಧಿ ಮುದ್ರೆ, ವಜ್ರಪದ್ಮ ಮುದ್ರೆ ಇತ್ಯಾದಿ ಮತ್ತೂ ಹಲವಾರು ಮುದ್ರೆಗಳಿದ್ದು ಅವೆಲ್ಲವನ್ನೂ ಬೋಧಿ ಸತ್ವರ ಶಿಲ್ಪಗಳಲ್ಲಿ ಉಪಯೋಗಿಸಲಾಗುತ್ತದೆ. ಭಾರತದಲ್ಲಿ ಕಾಲಕಾಲಕ್ಕೆ ಅರಳಿದ ಶಿಲ್ಪಕಲಾ ಪ್ರಕಾರಗಳಲ್ಲಿ, ಮುಖ್ಯವಾಗಿ ಗಾಂಧಾರ, ಮಥುರ ಮತ್ತು ಅಮರಾವತಿಯಂತಹ ಶಿಲ್ಪಶೈಲಿಗಳಲ್ಲಿ ಬುದ್ಧನ ಈ ಮುದ್ರೆಗಳನ್ನು ಅಭ್ಯಾಸ ಮಾಡಬಹುದು.

ಬ್ರಿಟಿಷರು ಭಾರತದಿಂದ ಕೊಂಡೊಯ್ದ ಅತ್ಯುತ್ತಮ ವಿಗ್ರಹಗಳನ್ನು ವಿಕ್ಟೋರಿಯ ಆಲ್ಬರ್ಟ್ ಮ್ಯೂಸಿಯಂನಲ್ಲಿ ಜತನವಾಗಿ ಕಾದಿರಿಸಿದ್ದಾರೆ. ನಮ್ಮ ಸಾರಾನಾಥ ಮತ್ತು ಕೋಲ್ಕತ್ತಾ ಮ್ಯೂಸಿಯಂನಲ್ಲೂ ಬುದ್ಧನ ಸುಪ್ರಸಿದ್ಧ ವಿಗ್ರಹಗಳಿವೆ. ತಪಸ್ಸಿಗೆ ಕುಳಿತ ಭಂಗಿಯ, ಮೂಳೆ ರಕ್ತನಾಳಗಳು ಎದ್ದು ಕಾಣುವಷ್ಟು ಕೃಶಕಾಯನಾದ ಬುದ್ಧನ ಶಿಲ್ಪಗಳಲ್ಲೇ ಮೇರುಕೃತಿ ಎಂದು ಪರಿಗಣಿತವಾಗಿರುವ ತೀರಾ ಅಪರೂಪದ ಶಿಲ್ಪವೊಂದು ಪಾಕಿಸ್ತಾನದ ಲಾಹೋರಿನ ಮ್ಯೂಸಿಯಂನಲ್ಲಿ ದೆ. ಇದರ ಮಾದರಿಯೊಂದನ್ನು ಭಾರತೀಯ ಶಿಲ್ಪಿಯೋರ್ವರು ನಿರ್ಮಿಸಿದ್ದು ಅದು ಸದ್ಯ ಚೆನೈಯಲ್ಲಿದೆ.

ಭಾರತೀಯ ಶಿಲ್ಪಶಾಸ್ತ್ರದಲ್ಲಿ ಮುದ್ರೆಗಳಿಗೆ ಅತ್ಯಂತ ಮಹತ್ವ ಇರುವದರಿಂದ ಶಿಲ್ಪಶಾಸ್ತ್ರದ ವಿದ್ಯಾರ್ಥಿಗಳಿಗೆ ಬುದ್ಧನ ನಿಲುವು ಮತ್ತು ಮುದ್ರೆಗಳು ಅಧ್ಯಯನಯೋಗ್ಯ ವಿಷಯವಾಗಿದೆ.

LEAVE A REPLY

Please enter your comment!
Please enter your name here