Home ಕ್ಲಾಸಿಪೈಡ್ ಮರೆವು ಶಾಪವಲ್ಲ ವರ!

ಮರೆವು ಶಾಪವಲ್ಲ ವರ!

44
0
SHARE

ಮರೆವು ಶಾಪವಲ್ಲ ವರ!

ನೀವು ಯಾವಾಗಲೂ ನಿಮ್ಮ ಸ್ನೇಹಿತರ ಅಥವಾ ಸಹೋದ್ಯೋಗಿಗಳ ಹೆಸರು ಮರೆತುಬಿಡುತ್ತೀರಾ? ಅಥವಾ ಆಫೀಸಿನ ಮೀಟಿಂಗ್ ಇರುವುದೇ ನಿಮಗೆ ಮರೆತು ಹೋಗುತ್ತಾ? ಒಂದು ವೇಳೆ ‘ಹೌದು’ ಎಂದಾದರೆ ನಿಮ್ಮನ್ನು ನೀವು ಮರೆಗುಳಿ ಎಂದು ತಿಳಿದುಕೊಳ್ಳುತ್ತಿರಬಹುದು. ಆದರೆ ಹಾಗೇನೂ ಇಲ್ಲ. ಪ್ರತಿಯೊಂದು ಸಂಗತಿಗೂ ಎರಡು ಮುಖಗಳಿರುವಂತೆ, ಮರೆವಿನಿಂದ ಕೆಲವು ಹಾನಿಗಳಿರುವ ಹಾಗೆ ಕೆಲವು ಲಾಭಗಳೂ ಇವೆ.

ಹಾನಿಗಳ ಬಗೆಗೆ ಹೇಳಬೇಕೆಂದರೆ, ನಮ್ಮ ದೈನಂದಿನ ಜೀವನದಲ್ಲಿ ಮರೆವು ಅತ್ಯಂತ ದೊಡ್ಡ ಸಮಸ್ಯೆ. ಮೇಲ್ಕಂಡ ಉದಾಹರಣೆಗಳು ತಮ್ಮ ದೈನಂದಿನ ಜೀವನದಲ್ಲಿ ಮರೆವಿನ ಅಭ್ಯಾಸದಿಂದ ಉತ್ಪನ್ನವಾದ ಸಮಸ್ಯೆಗಳಾಗಿವೆ. ನೀವು ನಿಮ್ಮ ಪರ್ಸ್ನಲ್ಲಿ ಬೀಗದ ಕೈಗಳನ್ನು ಇಟ್ಟುಕೊಳ್ಳುತ್ತೀರಿ, ಆದರೆ ಹುಡುಕುವ ಪ್ರಸಂಗ ಬಂದಾಗ ಪರ್ಸ ಒಂದನ್ನು ಬಿಟ್ಟು ಎಲ್ಲಾ ಕಡೆಯೂ ಹುಡುಕುತ್ತಿರಿ. ಒಮ್ಮೊಮ್ಮೆ ಮರೆವಿನಿಂದಾಗಿ ನಾವು ಬಹಳಷ್ಟು ಕಳೆದುಕೊಂಡು ಬಿಡುತ್ತೇವೆ.

ಅಂದ ಹಾಗೆ ಆಫೀಸಿನ ಮೀಟಿಂಗನ್ನು ಮರೆಯುವುದರಿಂದ ಬಾಸ್ನಿಂದ ಬೈಗುಳ ಅಥವಾ ನೌಕರಿಯಿಂದ ಕಿತ್ತು ಹಾಕುವ ಭೀತಿ ಅಥವಾ ನೀವು ಕಾಲೇಜು ವಿದ್ಯಾರ್ಥಿಯಾಗಿದ್ದರೆ ಪರೀಕ್ಷೆ ಸಮಯದಲ್ಲಿ ಹಾಲ್ ಟಿಕೆಟ್ ತೆಗೆದುಕೊಂಡು ಹೋಗದೇ ಇದ್ದರೆ ಪರೀಕ್ಷೆಗೆ ಕೂರಲು ಅನುಮತಿ ನೀಡದೇ ಇರಬಹುದು.
ವಿಜ್ಞಾನಿಗಳು ಮರೆವಿನ ಕುರಿತಂತೆ ಹಲವು ಸಂಶೋಧನೆಗಳನ್ನು ಕೈಗೊಂಡಿದ್ದಾರೆ. ಇದರ ಇನ್ನೊಂದು ಮುಖ ನೋಡುವುದಾದರೆ, ಮರೆಯುವುದು ಮಾನವನ ಜೀವನಕ್ಕೆ ಒಂದು ರೀತಿಯ ವರದಾನ. ಜೀವನ ಅತ್ಯಂತ ಭಯಾನಕ ಅಥವಾ ಕ್ಲಿಷ್ಟಕರವಾಗಿದ್ದರೆ, ಅವೆಲ್ಲ ಘಟನೆಗಳು ನಮ್ಮ ನೆನಪಲ್ಲಿ ಉಳಿದಿದ್ದರೆ ಅವನ್ನು ಮರೆಯುವುದು ನಮಗೆ ಸುಲಭವಾಗಿರುವುದಿಲ್ಲ.

ಆದರೆ ಕಾಲದ ಓಟದೊಂದಿಗೆ ಆ ಘಟನೆಗಳು ಹಾಗೂ ನೆನಪುಗಳು ಮಸುಕಾಗುತ್ತಾ ಹೋಗುತ್ತವೆ. ಇಂತಹ ಘಟನೆಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದರಿಂದ ಯಾವುದೇ ಲಾಭವಿಲ್ಲ. ಅತ್ಯಂತ ನಿಕಟ ಸಂಬಂಧದಲ್ಲಾದ ಸಾವಿನ ಘಟನೆಯನ್ನು ಸದಾ ನೆನಪಿನಲ್ಲಿ ಇಟ್ಟುಕೊಂಡರೆ ಯಾವಾಗಲೂ ದುಃಖದಲ್ಲಿಯೇ ಮುಳುಗಿರಬೇಕಾಗುತ್ತದೆ. ಇದು ನಮ್ಮ ಆರೋಗ್ಯಕ್ಕೆ ಹಾನಿಕಾರಕ.

ಇಂತಹ ಸ್ಥಿತಿಯಲ್ಲಿ ಉದ್ಭವಿಸುವ ಪ್ರಶ್ನೆಯೆಂದರೆ, ನಾವು ಏನನ್ನು ಮರೆಯಬೇಕು ಹಾಗೂ ಏನನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬುದರ ಬಗೆಗಿನ ಜ್ಞಾನ, ಅನುಭವ, ನೆನಪುಗಳು ನಮ್ಮ ಜೀವನದಲ್ಲಿ ಮುಂದೆ ಸಾಗಲು ಅನುಕೂಲಕರ. ಯಾವ ಸಂಗತಿಗಳು ನಿರರ್ಥಕವಾಗಿವೆಯೊ, ಅವನ್ನು ಮರೆತುಬಿಡುವುದೇ ಉತ್ತಮ.
ಮನೋವಿಜ್ಞಾನಿಗಳ ಪ್ರಕಾರ, ಮರೆತುಬಿಡುವುದು ನೆನಪಿನ ಶಕ್ತಿಯ ಒಂದು ಮಹತ್ವದ ಭಾಗವಾಗಿದ್ದು, ಅದು ಕೆಲಸ ಅಥವಾ ಘಟನೆಯನ್ನು ಯಾವುದಾದರೂ ವಿಶಿಷ್ಟ ಪರಿಸ್ಥಿತಿಯಲ್ಲಿ ನೆನಪಿನಲ್ಲಿ ಇಟ್ಟುಕೊಳ್ಳುವುದು ಹಾಗೂ ವಿಶೇಷ ಸಂದರ್ಭದಲ್ಲಿ ಮರೆಯುವುದನ್ನು ಬಿಂಬಿಸುತ್ತದೆ.
ಮರೆವಿಗೆ ಕಾರಣ.

ನಾವು ಯಾವುದೇ ಸಂಗತಿಯನ್ನು ಕ್ರಮೇಣ ಮರೆಯುತ್ತೇವೆ. ಇದಕ್ಕೆ ಹಲವು ಕಾರಣಗಳಿವೆ: ಯಾವ ಸಂಗತಿ ಅಥವಾ ವಸ್ತು ನಮ್ಮ ಜೀವನದಲ್ಲಿ ಎಷ್ಟು ಮಹತ್ವ ಹೊಂದಿದೆ ಎಂಬುದರ ಮೇಲೆ ಅದನ್ನು ಮರೆಯಬೇಕೋ, ನೆನಪಿನಲ್ಲಿಟ್ಟುಕೊಳ್ಳಬೇಕೋ ಎಂಬುದು ಅವಲಂಬಿಸಿರುತ್ತದೆ. ಯಾವ ಸಂಗತಿ ನಮಗೆ ಉಪಯುಕ್ತವಾಗಿದೆಯೋ, ನಮ್ಮ ಜೀವನಕ್ಕೆ ಹತ್ತಿರವಾಗಿದೆಯೊ ಅದು ಸಹಜವಾಗಿ ನೆನಪಿನಲ್ಲುಳಿಯುತ್ತದೆ. ವಿವಾಹ ವ್ಯಕ್ತಿಯೊಬ್ಬನ ಜೀವನದ ಪ್ರಮುಖ ಘಟನೆ. ಪ್ರತಿಯೊಬ್ಬರು ಇದಕ್ಕಾಗಿ ಯಾವುದಾದರೊಂದು ಕನಸು ಹೆಣೆದಿರುತ್ತಾರೆ. ಈ ಕಾರಣದಿಂದಲೇ ನಮಗೆ ಮದುವೆಯಾದ ಹಲವು ವರ್ಷಗಳ ಬಳಿಕವೂ ಮದುವೆ ದಿನಾಂಕ ನೆನಪಿರುತ್ತದೆ. ಅದೇ ಬೇರೊಬ್ಬ ಸ್ನೇಹಿತರು ಅಥವಾ ಸಂಬಂಧಿಕರ ಮದುವೆ ದಿನಾಂಕವನ್ನು ನಾವು ಮರೆತು ಬಿಡುತ್ತೇವೆ ಅಥವಾ ಯಾರಾದರೂ ನೆನಪು ಮಾಡಿಕೊಟ್ಟರೆ ನಮಗೆ ಅದು ನೆನಪಿಗೆ ಬರುತ್ತದೆ. ಸಾವಿನ ಸುದ್ಧಿ, ನೌಕರಿಯಿಂದ ತೆಗೆದು ಹಾಕಿದ ಸುದ್ಧಿ, ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವಂತಹ ಘಟನೆಗಳು ನಡೆದಾಗ ನಾವು ದುಃಖಿತರಾಗುತ್ತೇವೆ. ಅವು ನಮ್ಮ ಮೆದುಳಿನ ಮೇಲೆ ಗಾಢ ಪರಿಣಾಮ ಬೀರುತ್ತದೆ. ಆದರೆ ಕಾಲಕ್ರಮೇಣ ಅದು ನಮ್ಮ ಮನಸ್ಸಿನಿಂದ ಮಾಸುತ್ತ ಹೋಗುತ್ತದೆ. ನಾವು ಆ ಘಟನೆಯನ್ನು ಮರೆತುಬಿಡುತ್ತೇವೆ ಮತ್ತು ಮರೆಯುವುದು ನಮ್ಮ ಖುಷಿ ಮತ್ತು ಆರೋಗ್ಯಕರ ಜೀವನಕ್ಕೆ ಅತ್ಯವಶ್ಯ.

ಕಡಿಮೆ ಬಳಕೆ:
ನಾವು ಏನನ್ನು ಕಲಿತಿರುತ್ತೇವೋ ಅದನ್ನು ಕಾಲಕ್ರಮೇಣ ಮರೆಯುತ್ತೇವೆ. ಇದಕ್ಕೆ ಮುಖ್ಯ ಕಾರಣ ಅದನ್ನು ಕಡಿಮೆ ಉಪಯೋಗ ಮಾಡಿಕೊಳ್ಳುವುದಾಗಿದೆ. ನಾವು ಯಾವುದೇ ಪ್ರಕಾರದ ಜ್ಞಾನ ಪಡೆದುಕೊಂಡ ನಂತರ ಅದನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳದೇ ಇದ್ದಾಗ ಅದು ನಮ್ಮಿಂದ ಮರೆಯುತ್ತ ಹೋಗುತ್ತದೆ. ಉದಾಹರಣೆಗೆ ನಾವು ಬಾಲ್ಯದಲ್ಲಿ ಕವಿತೆಯೊಂದನ್ನು ಕಲಿತಿರುತ್ತೇವೆ. ವಯಸ್ಸು ಹೆಚ್ಚುತ್ತಾ ಹೋದಂತೆ ಅದನ್ನು ನೆನಪಿಸಿಕೊಳ್ಳದೇ ಇರುವುದರಿಂದ ಅದು ನಮಗೆ ಮರೆತುಹೋಗುತ್ತದೆ. ಇದೇ ಕಾರಣದಿಂದ ನಮ್ಮ ಬಾಲ್ಯದ ಅನುಭವಗಳು, ಮಾತುಗಳು ನೆನಪಿನಲ್ಲುಳಿಯುವುದಿಲ್ಲ.

ಘಟನೆಗಳ ಹಸ್ತಕ್ಷೇಪ:
ಜೀವನದಲ್ಲಿ ಘಟಿಸಿದ ಘಟನೆ ಅತ್ಯಂತ ಕೆಟ್ಟದಾಗಿದ್ದರೆ, ಅದು ಘಟಿಸಿದ ಕೆಲವೇ ದಿನಗಳಲ್ಲಿ ಒಳ್ಳೆಯ ಘಟನೆ ಘಟಿಸಿದರೆ ಕೆಟ್ಟ ಘಟನೆಯನ್ನೂ ಸುಲಭವಾಗಿ ಮರೆಯಬಹುದು. ಅದಕ್ಕೆ ಉದಾಹರಣೆಯೊಂದನ್ನು ನೋಡಿ. ಮದುವೆಯಾದ ಅನೇಕ ವರ್ಷಗಳ ಬಳಿಕ ಭಾವನಾ ಗರ್ಭಿಣಿಯಾದಾಗ ಆಕೆ ಹಾಗೂ ಪತಿ ರಾಜೇಶ್ ಬಹಳ ಖುಷಿಯಿಂದಿದ್ದರು. ಆದರೆ ಒಂದು ದಿನ ಭಾವನಾ ಕಾಲು ಜಾರಿ ಬಿದ್ದಿದ್ದರಿಂದಾಗಿ ಅವಳಿಗೆ ಗರ್ಭಪಾತವಾಯಿತು. ಭಾವನಾಳ ಮೇಲಂತೂ ದುಃಖದ ಪರ್ವತವೇ ಕುಸಿದು ಬಿದ್ದಂತಾಯಿತು. ಆದರೆ ಕೆಲವೇ ತಿಂಗಳಲ್ಲಿ ಆಕೆ ಪುನಃ ಗರ್ಭಿಣಿಯಾದಳು, ದಿನ ತುಂಬಿದ ಬಳಿಕ ಒಂದು ಸುಂದರ ಹೆಣ್ಣುಮಗುವಿಗೆ ಜನ್ಮ ನೀಡಿದಳು. ಈ ಖುಷಿಯಲ್ಲಿ ಅವಳು ತನ್ನ ಮೊದಲ ಗರ್ಭಪಾತದ ದುಃಖವನ್ನು ಮರೆತೇಬಿಟ್ಟಳು. ಈಗ ನಿಮಗೇ ಗೊತ್ತಾಗಿರಬೇಕು, ಮರೆಯುವುದು ಒಂದು ರೋಗವೆನಲ್ಲ, ಅದು ಮೆದುಳಿನ ಕೆಲಸ ಕಾರ್ಯಗಳ ಒಂದು ಅತ್ಯವಶ್ಯ ಭಾಗ ಎಂದು. ಮನುಷ್ಯ ಜೀವನಕ್ಕೆ ಇದು ಅವಶ್ಯಕ. ಒಂದು ವೇಳೆ ನೀವು ಮಾತನಾಡುತ್ತಿರುವಾಗ ಮೇಲಿಂದ ಮೇಲೆ ಮರೆಯುತ್ತಿದ್ದರೆ ಅಥವಾ ಮುಂಜಾನೆ ಹೇಳಿದ್ದು ಸಂಜೆ ನೆನಪಿರದಿದ್ದರೆ ವೈದ್ಯರೊಂದಿಗೆ ಸಮಾಲೋಚಿಸುವುದು ಸೂಕ್ತ.

LEAVE A REPLY

Please enter your comment!
Please enter your name here