Home ಕ್ಲಾಸಿಪೈಡ್ ಗಂಗಾಮೃತ:

ಗಂಗಾಮೃತ:

39
0
SHARE

ಗಂಗಾಮೃತ:
ಮನೆಗೆ ಬಂದ ಅತಿಥಿಗಳಿಗೆ ಮೊದಲು ಕುಶಲೋಪರಿಯೊಂದಿಗೆ ನೀರು ಕೊಟ್ಟು ಉಪಚರಿಸಿದ ಮೇಲೆಯೇ ಮತ್ತೆಲ್ಲಾ ಸತ್ಕಾರಗಳು. ಅಂತಹ ಸಮಯದಲ್ಲಿ ಬಾಯಾರಿದವರಿಗೆ ಒಂದು ಲೋಟ ನೀರೂ ಸಹ ಅಮೃತ ಸಮಾನವೆನಿಸುತ್ತದೆ. ನಿಜಕ್ಕೂ ನೀರು ಅಮೃತವೇ ಸರಿ. ಅದಕ್ಕೇ ‘ಗಂಗಾಮೃತ’ವೆನ್ನುವ ಅನ್ವರ್ಥನಾಮವೂ ನೀರಿಗೆ ಇದೆ.

ವ್ಯಕ್ತಿ ತನ್ನ ದಾಹ ಇಂಗಿಸಿಕೊಳ್ಳಲು ವಿವಿಧ ಪಾನೀಯಗಳಾದ ಎಳನೀರು, ಮಜ್ಜಿಗೆ, ಪಾನಕ, ಸೋಡ, ಕಾಫಿ, ಟೀ ಮುಂತಾದವುಗಳನ್ನು ಕುಡಿಯುವುದುವಾಡಿಕೆ. ಆದರೆ ಇವು ಯಾವುದೂ ನೀರಿನಷ್ಟು ಸಹಜವಾಗಿ ಬಾಯಾರಿಕೆಯನ್ನು ನೀಗಿಸಿ ತೃಪ್ತಿ ನೀಡಲಾರವು.
ಬೇಸಿಗೆಯ ಅಗ್ಗಾರಿನಲ್ಲಿ ನೀರು ಬಾವಿ, ಕೆರೆಗಳ ತಳ ತಲುಪಿರುತ್ತದೆ. ನಲ್ಲಿಗಳಲ್ಲೂ ಸಹ ಶುದ್ಧ ನೀರು ದೊರಕುವುದು ಕಷ್ಟವಾಗಿರುತ್ತದೆ. ಕುಡಿಯಲು ತಾಜಾ ನೀರು ಸಿಗದಿರುವ ಇಂತಹ ಸಮಯದಲ್ಲಿ ನೀರನ್ನು ಸಂಸ್ಕರಿಸಿ ಕುಡಿಯಲು ಯೋಗ್ಯವಾಗಿಸುವ ಹಲವು ವಿಧಾನಗಳನ್ನು ನಮ್ಮ ಪೂರ್ವಿಕರು ಕಂಡುಕೊಂಡಿದ್ದರು. ಹಲವು ಸಸ್ಯಗಳಿಂದ ನೀರನ್ನು ಹೇಗೆ ಸಂಸ್ಕರಿಸಿ ಉಪಯೋಗಿಸಬಹುದೆಂದು ತಿಳಿಯೋಣ.

ಲಾವಂಚ:
ನೀರನ್ನು ಸಂಗ್ರಹಿಸಿಟ್ಟ ಪಾತ್ರೆಯಲ್ಲಿ ಮೂರು-ನಾಲ್ಕು ಲಾವಂಚದ ಬೇರನ್ನು ಹಾಕಿಟ್ಟರೆ ಆ ನೀರಿನ ಪರಿಮಳವೇ ಬೇರೆಯಾಗಿರುತ್ತದೆ. ಕುಡಿಯಲು ಹಿತವೆನಿಸುವ ಲಾವಂಚದ ನೀರನ್ನು ಬಾಟಲಿಯಲ್ಲಿ ತುಂಬಿಕೊಂಡು ಹೊರಗೆ ಒಯ್ಯಬಹುದು. ಕಾಯಿಸಿದ ನೀರನ್ನು ಸ್ವಲ್ಪ ರುಚಿ ಕಳೆದುಕೊಳ್ಳುವುದರಿಂದ ಲಾವಂಚದ ಬೇರು ರುಚಿ ಹೆಚ್ಚಿಸುತ್ತದೆಯಲ್ಲದೇ ಬೆವರಿನ ದುರ್ಗಂಧವನ್ನು ನೀಗಿಸುತ್ತದೆ.

ಕಚೋರ:
ಕಚೋರ ಒಂದು ಸುಗಂಧ ಸಸ್ಯ. ಪುರಾತನ ಕಾಲದಿಂದಲೂ ಇದಕ್ಕೆ ಅಷ್ಟ ಗಂಧಗಳಲ್ಲಿ ಒಂದು ಸ್ಥಾನವಿದೆ. ದೇವತಾ ಕಾರ್ಯಗಳಲ್ಲಿ ತಯಾರಿಸುತ್ತಿದ್ದ ತೀರ್ಥದಲ್ಲಿ ಇದನ್ನು ಬಳಸುತ್ತಿದ್ದರು. ಕಚೋರ ದೇಹ ಶುದ್ಧಿ ಹಾಗೂ ತಂಪಾಗಿಸಲು ಸಹಕಾರಿಯಾಗಿದೆ. ನೆಲದಿಂದ ತೆಗೆದ ಕಚೋರದ ಗಡ್ಡೆಯನ್ನು ನೀರಿನಲ್ಲಿ ತೊಳೆದು ನಂತರ ಚೆನ್ನಾಗಿ ಜಜ್ಜಿ ಬಿಳಿ ಬಟ್ಟೆಯಲ್ಲಿ ಗಂಟು ಕಟ್ಟಿ ನೀರಿನ ಪಾತ್ರೆಯಲ್ಲಿ ಹಾಕಿಡಬೇಕು. ಕಚೋರ ನೀರಿನ ಅಡ್ಡ ವಾಸನೆಗಳನ್ನು ನಿವಾರಿಸುತ್ತದೆ ಅಲ್ಲದೆ ಧರ್ಮ ಹಾಗೂ ಹೊಟ್ಟೆಗೆ ಚೇತೋಹಾರಿಯಾಗಿದೆ.

ರಾಸ್ನಾ
ಈ ಸಸ್ಯವು ತನ್ನದೇ ಆದ ಪರಿಮಳದಿಂದ ಕೂಡಿದ್ದು ದೇಹಕ್ಕೆ ಪುಷ್ಟಿ ಕೊಡುವುದರಿಂದ ಬಲಾರಿಷ್ಟ ಮುಂತಾದ ಔಷಧಗಳಲ್ಲಿ ಇದನ್ನು ಉಪಯೋಗಿಸಲಾಗುತ್ತದೆ. ಇದರ ಬೇರನ್ನು ಸಹ ಸ್ವಚ್ಛಗೊಳಿಸಿ ಚೆನ್ನಾಗಿ ಜಜ್ಜಿ ಬಿಳಿ ಬಟ್ಟೆಯಲ್ಲಿ ಗಂಟು ಕಟ್ಟಿ ನೀರಿನಲ್ಲಿ ಹಾಕಿಟ್ಟರೆ ಬಿಸಿಲ ಬೇಗೆಯಲ್ಲಿ ಕುಡಿಯಲು ಆರೋಗ್ಯಕರ ಮತ್ತು ರುಚಿಕರ ನೀರು ದೊರುಕುತ್ತದೆ.

ಲವಂಗ ತುಳಿಸಿ
ಹೆಸರೇ ತಿಳಿಸುವಂತೆ ಲವಂಗ ಹಾಗೂ ತುಳುಸಿ ಎರಡರ ಪರಿಮಳವನ್ನೂ ಒಳಗೊಂಡಿರುವ ಈ ಸಸ್ಯದ ರಸವನ್ನು ಮಕ್ಕಳಿಗೆ ಕಫ ಮತ್ತು ಶೀತಭಾದೆಯ ನಿವಾರಣೆಗಾಗಿ ಉಪಯೋಗಿಸುತ್ತಾರೆ. ಕುಡಿಯುವ ನೀರಿನ ಪಾತ್ರೆಗೆ ಒಂದು ಹಿಡಿಯಷ್ಡು ಇದರ ಎಲೆಗಳನ್ನು ಹಾಕಿರಿಸಿದರೆ ಹಿತವಾದ ಕುಡಿಯವ ನೀರು ಲವಂಗ ಮತ್ತು ತುಳಸಿಯ ಸ್ವಾದಗಳೊಂದಿಗೆ ತಯಾರಾಗುತ್ತದೆ.

ತುಳಸಿ:
ತುಳಸಿ ದಳಗಳನ್ನು ನೀರಿನಲ್ಲಿ ಹಾಕಿ ಇಡುವುದರಿಂದ ಕ್ರಿಮಿನಾಶಕದಂತೆ ಕೆಲಸ ಮಾಡಿ ಶುದ್ಧ ಕುಡಿಯುವ ನೀರನ್ನು ಒದಗಿಸಿಕೊಡುತ್ತದೆ. ಅಧಿಕ ರಕ್ತದೊತ್ತಡ ಇರುವವರಿಗೆ ತುಳಸಿ ನೀರು ತುಂಬಾ ಉಪಯುಕ್ತವಾಗಿದೆ. ಸಾಮಾನ್ಯವಾಗಿ ತುಳಸಿ ನೀರು ಗಂಟಲು ಕೆರೆತ ಮುಂತಾದ ತೊಂದರೆಗಳನ್ನು ನಿವಾರಿಸಿತ್ತದೆ. ದೇವಾಲಯಗಳಲ್ಲಿ ತುಳಸಿ ಹಾಕಿದ ನೀರನ್ನು ತೀರ್ಥರೂಪದಲ್ಲಿ ಕೊಡುವ ಪದ್ದತಿ ಪುರಾತನ ಕಾಲದಿಂದಲೂ ಇದೆ. ಮನೆಗಳಲ್ಲೂ ಸಹ ತುಳಸಿ ನೀರನ್ನು ವಾರದಲ್ಲಿ ಒಂದು ದಿನವಾದರೂ ಕುಡಿಯುವುದರಿಂದ ಆರೋಗ್ಯಕ್ಕೂ ಒಳ್ಳೆಯದು ಮತ್ತು ಬೇಸಿಗೆಯ ದಾಹವನ್ನೂ ತಣಿಸುತ್ತದೆ.

ಶ್ರೀಗಂಧ:
ಅತ್ಯಂತ ಸುವಾಸನೆಯಿಂದ ಕೂಡಿರುವ ಶ್ರೀಗಂಧ, ದೇಹಕ್ಕೆ ತಂಪನ್ನು ನೀಡುತ್ತದೆ. ಗಂಧದ ಕೊರಡನ್ನು ಕೆತ್ತಿ ಸಣ್ಣ ಸಣ್ಣ ತುಂಡುಗಳನ್ನು ಮಾಡಿ, ಬಿಳಿ ಬಟ್ಟೆಯಲ್ಲಿ ಕಟ್ಟಿ ನೀರಿನ ಪಾತ್ರೆಯಲ್ಲಿ ಹಾಕಿಟ್ಟು ಐದಾರು ಗಂಟೆಗಳ ನಂತರ ಪರಿಮಳಯುಕ್ತ ನೀರನ್ನು ಬಳಸಬಹುದು. ಒಣ ಕೆಮ್ಮು ಮತ್ತು ಉರಿಶೀತ ಭಾದೆಗಳಿಗೆ ಉಪಶಮನಕಾರಿ. ಬಳಸಿದ ಗಂಧದ ಚಕ್ಕೆಗಳನ್ನು ಮತ್ತೆ ಪುನಃ ಮೂರು ನಾಲ್ಕು ದಿನಗಳವರೆಗೂ ಬಳಸಬಹುದು.

ಸೂಜಿ ಮಲ್ಲಿಗೆ ಮತ್ತು ಜಾಜಿ ಮಲ್ಲಿಗೆ:
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸಾಮಾನ್ಯವಾಗಿ ಈ ಹೂಗಳು ಅರಳಿ ಕಂಪು ಸೂಸುತ್ತಿರುತ್ತವೆ. ಮುಂಜಾನೆ ದುಂಬಿ ಮುಟ್ಟುವ ಮೊದಲೆ ಈ ಹೂಗಳನ್ನು ಕಿತ್ತು ನೀರಿನಲ್ಲಿ ಹಾಕಿಟ್ಟರೆ ಸುವಾಸನೆ ಭರಿತವಾದ ನೀರು ಕುಡಿಯಲು ದೊರೆಯುತ್ತದೆ. ಸೂಜಿ ಮಲ್ಲಿಗೆ ಅಥವಾ ಕಸ್ತೂರಿ ಮಲ್ಲಿಗೆ ಹಿತಕರವಾದ ಪರಿಮಳದಿಂದ ಕೂಡಿದ್ದರೆ, ಜಾಜಿ ಮಲ್ಲಿಗೆ ಪರಿಮಳದೊಂದಿಗೆ ಔಷಧೀಯ ಗುಣವನ್ನೂ ಹೊಂದಿದೆ. ಮಲ್ಲಿಗೆಯ ನೀರಿನಿಂದ ರಕ್ತ ಶುದ್ಧಿಯಾಗುವುದರ ಜೊತೆಗೆ ದೇಹ ತಂಪಾಗಿರುತ್ತದೆ.

ಗುಲಾಬಿ:
ಮನೆಯಂಗಳದಲ್ಲಿ ಸಿಗುವ ಗುಲಾಬಿಯ ಹೂಗಳನ್ನು ಮುಂಜಾನೆ ದುಂಬಿ ಮುಟ್ಟುವ ಮೊದಲು ಕಿತ್ತು ಅದರ ದಳಗಳನ್ನು ನೀರಿನಲ್ಲಿ ಹಾಕಿ ಮೂರರಿಂದ ನಾಲ್ಕು ಗಂಟೆಗಳ ನಂತರ ಕುಡಿಯುವುದರಿಂದ ದೇಹಕ್ಕೆ ತಂಪು ಮತ್ತು ಇದರ ಪರಿಮಳ ಮನಸ್ಸಿಗೆ ಮುದ ನೀಡುತ್ತದೆ. ಪನ್ನೀರು ಗುಲಾಬಿ ಹೂ ದಳಗಳಾದರಂತೂ ಇನ್ನೂ ಹಿತಕರವಾದ ಪರಿಮಳದ ನೀರನ್ನು ಪಡೆಯಬಹುದು. ಅಧಿಕ ರಕ್ತದೊತ್ತಡ ಇರುವವರಿಗೆ ಗುಲಾಬಿ ನೀರು ತುಂಬಾ ಪರಿಣಾಮಕಾರಿ.

ರುದ್ರಾಕ್ಷಿ:
ತಾಮ್ರದ ತಂಬಿಗೆಯೊಳಗೆ ಒಂದೆರಡು ರುದ್ರಾಕ್ಷಿಗಳನ್ನು ಮತ್ತು ನೀರನ್ನು ಹಾಕಿ ರಾತ್ರಿ ಇರಿಸಿ ಬೆಳೆಗ್ಗೆ ಈ ನೀರನ್ನು ಹಾಕಿ ರಾತ್ರಿ ಇರಿಸಿ ಬೆಳಿಗ್ಗೆ ಈ ನೀರನ್ನು ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು. ರುದ್ರಾಕ್ಷಿಯು ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸುತ್ತದೆ. ಮೇಲೆ ತಿಳಿಸಿದ ಎಲ್ಲ ವಿಧಾನಗಳಲ್ಲಿಯೂ ನೀರನ್ನು ಮಣ್ಣಿನ ಹೂಜಿ, ತಾಮ್ರದ ಬಿಂದಿಗೆ ಅಥವಾ ಬೆಳ್ಳಿಯ ಪಾತ್ರೆಯಲ್ಲಿ ಸಂಗ್ರಹಿಸುವುದು ಸೂಕ್ತ.

LEAVE A REPLY

Please enter your comment!
Please enter your name here