Home ಕ್ಲಾಸಿಪೈಡ್ ಬ್ರೆಡ್, ಬನ್ಗಳಲ್ಲಿ ವಿಷ!

ಬ್ರೆಡ್, ಬನ್ಗಳಲ್ಲಿ ವಿಷ!

48
0
SHARE

ಬ್ರೆಡ್, ಬನ್ಗಳಲ್ಲಿ ವಿಷ!
ನಮ್ಮ ಬಹುತೇಕ ಪ್ರಖ್ಯಾತ ಬ್ರ್ಯಾಂಡ್ಗಳ ಬ್ರೆಡ್, ಬನ್ ಮತ್ತು ಪಾವ್ಗಳಲ್ಲಿ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಪೊಟಾಷಿಯಂ ಬ್ರೊಮೆಟ್ ಮತ್ತು ಪೊಟಾಷಿಯಂ ಐಯೊಡೆಟ್ ಎಂಬ ಹಾನಿಕಾರಕ ರಾಸಾಯನಿಕ ಅಂಶಗಳಿವೆ ಎನ್ನುವುದು ಕಳೆದ ವಾರದ ದೊಡ್ಡ ಸುದ್ದಿ. ಸಾಕಷ್ಟು ಜನರನ್ನು ಚಿಂತೆಗೆ ದೂಡಿದ ಸುದ್ದಿಯಿದು. ಸುದ್ದಿ ಓದಿದಾಗ ಜನರು ಚಿಂತೆಗೆ ಒಳಗಾದದ್ದು ಸಹಜವೇ. ಹಾಗೆಂದು ಬ್ರೆಡ್, ಬನ್ ಮತ್ತು ಪಾವ್ ಬಾಜಿ ತಿನ್ನುವುದನ್ನು ಬಿಡಲಾದೀತೆ? ಸುದ್ದಿ ಓದಿದ ಒಂದೆರಡು ವಾರ ಬ್ರೆಡ್ ಖರೀದಿಸುವುದನ್ನು ಬಿಟ್ಟ ಜನರೂ, ಆ ಬಳಿಕ ಮತ್ತೆ ತಿನ್ನುವ ಕಾಯಕ ಮುಂದುವರಿಸಿದ್ದಾರೆ

. ‘ಆದದ್ದಾಗಲಿ, ದೇವರಿದ್ದಾನೆ’ ಎನ್ನುವುದು ನಮ್ಮಲ್ಲಿ ಬಹುತೇಕರ ದೃಢ ನಂಬಿಕೆ. ಬಡವರಿಂದ ಶ್ರೀಮಂತರವರೆಗೂ ಯಾವ ಭೇದವೂ ಇಲ್ಲದೆ ದಿನನಿತ್ಯದ ಆಹಾರವಾಗಿರುವ ಬ್ರೆಡ್ ಮತ್ತು ಬನ್ಗಳಲ್ಲಿ ಅಪಾಯಕಾರಿ ರಾಸಾಯನಿಕ ಬಳಸಿದವರಿಗೆ ಶಿಕ್ಷೆ ಆಗುತ್ತದೆಯೆ? ಹೀಗೆ ಕ್ಯಾನ್ಸರ್ಕಾರಕ ರಾಸಾಯನಿಕಗಳನ್ನು ಬಳಸದಂತೆ ತಡೆಯುವ ಕಾನೂನು ಮಹತ್ವದ್ದು. ಆದರೆ ಈ ಪ್ರಶ್ನೆಗಳ ಬಗ್ಗೆ ಚಿಂತಿಸಲು ಜನರಿಗೆ ಸಮಯವೆಲ್ಲಿದೆ? ಚಿಂತಿಸಿದರೂ ಕಾನೂನು ಪಾಲಕರ ಮೇಲೆ ಒತ್ತಡ ಹೇರಿ ಕ್ರಮ ಜರುಗಿಸಲು ಜನರಿಗೆ ಸಾಧ್ಯವಿದೆಯೆ?

‘ಇನ್ನು ಮುಂದೆ ಬ್ರೆಡ್, ಬನ್ ಮತ್ತು ಪಾವ್ಗಳಲ್ಲಿ ಈ ಕ್ಯಾನ್ಸರ್ಕಾರಕ ರಾಸಾಯನಿಕಗಳನ್ನು ಬಳಸುವುದಿಲ್ಲ; ಈಗಿಂದೀಗಲೇ ಇವುಗಳ ಬಳಕೆಯನ್ನು ನಿಲ್ಲಿಸಿದ್ದೇವೆ’ ಎಂದು ಎರಡೇ ದಿನಗಳಲ್ಲಿ ಪ್ರತಿಷ್ಠಿತ ಬ್ರೆಡ್ ತಯಾರಕ ಕಂಪೆನಿಗಳ ವಕ್ತಾರರು ಸ್ಪಷ್ಟೀಕರಣ ನೀಡಿದ್ದಾರೆ. ಆದರೆ ಅವರು ಹೇಳಿದಂತೆ ನಡೆದುಕೊಳ್ಳುತ್ತಾರೆಯೆ? ಹಾಗೆ ನಡೆದುಕೊಂಡಿದ್ದಾರೆಂದು ಉತ್ಪನ್ನಗಳನ್ನು ಪರೀಕ್ಷಿಸಿ ಶಿಫಾರಸು ಮಾಡುವವರು ಯಾರು? ಈವರೆಗೆ ಇಂತಹ ಉತ್ಪನ್ನಗಳನ್ನು ತಿಂದು ಅರೋಗ್ಯಕ್ಕೆ ಹಾನಿ ಉಂಟು ಮಾಡಿಕೊಂಡದ್ದಕ್ಕೆ ಯಾರು ಹೊಣೆಗಾರರು? ಸರ್ಕಾರ ಈ ನಿಟ್ಟಿನಲ್ಲಿ ಏಕೆ ನಿರ್ಲಕ್ಷ್ಯ ತೋರುತ್ತಿದೆ? ಪರಿಸರ ಕೇಂದ್ರದ (ಸಿಎಸ್ಇ) ಅಧ್ಯಯನವೊಂದು ಈ ವಿಷಯವನ್ನು ಪ್ರಕಟಿಸಿದಾಗಷ್ಟೇ ನಮಗೆ ಈ ಸತ್ಯ ಗೊತ್ತಾದದ್ದು. ಅದೂ ದೆಹಲಿಯಲ್ಲಿ ಮಾರಟವಾಗುವ ಉತ್ಪನ್ನಗಳ ಮೇಲೆ ನಡೆದ ಅಧ್ಯಯನ.

ದೆಹಲಿಯಲ್ಲಿ ಮಾರಾಟವಾಗುತ್ತಿರುವ 38 ಬ್ರ್ಯಾಂಡ್ಗಳ ಪೈಕಿ 32ರಲ್ಲಿ ಕ್ಯಾನ್ಸರ್ ತರಬಲ್ಲ ರಾಸಾಯನಿಕಗಳ ಬಳಕೆ ನಡೆದಿದೆಯಂತೆ. ದೇಶದ ಉಳಿದ ನಗರಗಳಲ್ಲಿ ಇರುವ ಆ ಹಾರೋತ್ಪನ್ನಗಳ ಮೇಲಿನ ಅಧ್ಯಯನ ಕೇಂದ್ರಗಳು ಎನು ಮಾಡುತ್ತಿವೆ? ಅವುಗಳು ಇಂತಹ ಅಧ್ಯಯನಗಳನ್ನು ಮಾಡಿದ್ದರೂ ಆ ವರದಿಗಳು ಏಕೆ ಪ್ರಕಟವಾಗಿಲ್ಲ? ಪ್ರಕಟವಾಗಿದ್ದರೂ ಗ್ರಾಹಕರಿಗೆ ಏಕೆ ಗೊತ್ತಾಗಿಲ್ಲ?
ಬನ್, ಬ್ರೆಡ್ಗಳಲ್ಲಿ ಕ್ಯಾನ್ಸರ್ ತರುವ ಪೊಟಾಷಿಯಂ ಬ್ರೊಮೆಟ್ ಮತ್ತು ಪೊಟಾಷಿಯಂ ಐಯೊಡೆಟ್ ರಾಸಾಯನಿಕಗಳನ್ನು ನಿಷೇಧಿಸಬೇಕು ಎಂದು ಕಳೆದ ಜನವರಿಯಲ್ಲೇ ಭಾರತೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ ಆದೇಶ ಹೊರಡಿಸಿದೆ.

ಆದರೆ ಈ ಆದೇಶಕ್ಕೆ ನಮ್ಮ ಆಹಾರೋತ್ಪನ್ನ ಕಂಪೆನಿಗಳು ಈವರೆಗೆ ‘ಕ್ಯಾರೇ’ಎಂದಿಲ್ಲ. ಕ್ಯಾನ್ಸರ್ ಸಂಶೋಧನೆಯ ಅಂತರರಾಷ್ಟ್ರೀಯ ಸಂಸ್ಥೆ ಈ ವಿಷಯವನ್ನು 1999ರಲ್ಲೇ ಪತ್ತೆ ಮಾಡಿತ್ತು. ಬ್ರಿಟನ್ ಸೇರಿದಂತೆ ಹಲವು ದೇಶಗಳು ಇದನ್ನು ಆಗಲೇ ನಿಷೇಧಿಸಿದ್ದವು. ನಮ್ಮ ಸರ್ಕಾರಗಳು ಮಾತ್ರ ಜನರ ಆರೋಗ್ಯದ ಬಗ್ಗೆ ನಿಷ್ಕಾಳಜಿ ವಹಿಸಿದ್ದು, ನಿಷೇಧದ ಗೋಜಿಗೇ ಹೋಗಿಲ್ಲ. ಸದ್ಯಕ್ಕೆ ಸುದ್ದಿಯಾಗಿರುವುದು ಪ್ರತಿಷ್ಠಿತ ಬ್ರ್ಯಾಂಡ್ಗಳ ಉತ್ಪನ್ನಗಳು ಮಾತ್ರ. ನಮ್ಮ ಲಕ್ಷಾಂತರ ಹಳ್ಳಿಗಳಲ್ಲಿ ಉತ್ಪಾದನೆಯಾಗುವ ಸ್ಥಳೀಯ ಬ್ರ್ಯಾಂಡ್ಗಳ ಬ್ರೆಡ್, ಬನ್,ಪಾವ್ಗಳ ಸುರಕ್ಷತೆಯ ಬಗ್ಗೆ ಅಧ್ಯಯನ ನಡೆಯುವುದೇ ಇಲ್ಲ. ಆಹಾರ ಸುರಕ್ಷತೆ ಗುಣಮಟ್ಟ ಪರೀಕ್ಷೆಗಳನ್ನು ಜಿಲ್ಲಾ ಮಟ್ಟಗಳಲ್ಲೂ ಕಟ್ಟುನಿಟ್ಟಾಗಿ ಜಾರಿಗೆ ತರುವ ಅಗತ್ಯ ಈಗ ಹಿಂದೆಂದಿಗಿಂತ ಹೆಚ್ಚಾಗಿದೆ. ಆಹಾರ ಪರೀಕ್ಷೆ ಮಾರ್ಗದರ್ಶಿ ಸೂತ್ರಗಳನ್ನು ಮರುವಿಮರ್ಶೆಗೆ ಒಳಪಡಿಸುವ ಕೆಲಸವೂ ಆಗಾಗ್ಗೆ ನಡೆಯುತ್ತಿರಬೇಕು. ಲಾಭವನ್ನೇ ಗುರಿಯಾಗಿಟ್ಟುಕೊಂಡು, ಜನರ ಆರೋಗ್ಯದ ಜತೆಗೆ ಚೆಲ್ಲಾಟವಾಡುವ ಆಹಾರೋತ್ಪನ್ನ ಕಂಪೆನಿಗಳನ್ನು ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು.

LEAVE A REPLY

Please enter your comment!
Please enter your name here