Home ಕ್ಲಾಸಿಪೈಡ್ ಕಾಡು ಜನರ ದೃಶ್ಯ ಕಾವ್ಯ ಗೊಂಡ ಕಲೆ:

ಕಾಡು ಜನರ ದೃಶ್ಯ ಕಾವ್ಯ ಗೊಂಡ ಕಲೆ:

38
0
SHARE

ಕಾಡು ಜನರ ದೃಶ್ಯ ಕಾವ್ಯ ಗೊಂಡ ಕಲೆ:

ಗೊಂಡ ಕಲೆಯೆಂದರೆ ಜೀವಂತಿಕೆ. ಬಣ್ಣಗಳ ಓಕುಳಿ. ವಿಶಿಷ್ಟವಾದ ರೇಖೆ, ಚುಕ್ಕಿ, ಬೊಟ್ಟು, ಅವುಗಳಲ್ಲಿ ಅನಾವರಣಗೊಳ್ಳುವ ವನವಾಸಿಗಳ ಅನನ್ಯ ಬದುಕು ಒಂದು ಅಪರೂಪದ ದೃಶ್ಯಕಾವ್ಯ. ಮಧ್ಯ ಭಾರತದ ಬಹುದೊಡ್ಡ ಆದಿವಾಸಿಗಳ ಪಂಗಡ ಗೊಂಡರದು. ಮಧ್ಯಪ್ರದೇಶದಲ್ಲಿ ಇವರು ಇಲ್ಲದ ಊರಿಲ್ಲ, ಮಾಡದ ಕೆಲಸವಿಲ್ಲ ಎಂದು ಇವರ ಬಗ್ಗೆ ಅಧ್ಯಯನ ನಡೆಸಿದ ಸಾಹಿತಿ ಕೃಷ್ಣಾನಂದ ಕಾಮತರು ಹೇಳುತ್ತಾರೆ.

ಮಧ್ಯಪ್ರದೇಶದ ಮತ್ತು ಛತ್ತಿಸಘಡಗಳ ಆದಿವಾಸಿಗಳ ಪೈಕಿ ಶೇಕಡಾ 40 ರಷ್ಟು ಗೊಂಡರೇ ಇದ್ದಾರೆ. ಪಟ್ಟಣದ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಇವರ ವಾಸ. ಬೆಳಗಿನ ಜಾವ ಇನ್ನೂ ಕತ್ತಲಿರುವಾಗಲೇ ಪಟ್ಟಣಕ್ಕೆ ಬಂದು ದಿನವಿಡೀ ದುಡಿದು, ಸಾಯಂಕಾಲ ಕೈಗೆ ಹಾಕಿದ ಅಲ್ಪ ಸಂಬಳದಲ್ಲಿಯೇ ಉಪ್ಪು, ಕಾರ, ಎಣ್ಣೆ, ಮಕ್ಕಳಿಗೆ ಅಗ್ಗದ ಮಿಠಾಯಿ ಕೊಂಡು ಗೃಹಾಭಿಮುಖಿಗಳಾದರೆಂದರೆ ಅವರ ಪಾಲಿಗೆ ಅದೊಂದು ಯಶಸ್ವಿ ದಿನ ಎಂದೂ ಅವರು ಉಲ್ಲೇಖಿಸುತ್ತಾರೆ.

ಗೊಂಡರ ಬದುಕಿನಷ್ಟೇ ಅವರ ಕಲೆಯೂ ಸಮೃದ್ಧ. ಅಲ್ಲಿರುವುದು ಅವರ ಹೆಂಗಸರು ಉಡುವ ಒಂಬತ್ತು ಗಜದ ಕೆಂಪು, ನೀಲಿ, ಜಾಂಬಳಿ, ಹಸಿರು ಬಣ್ಣದ ಸೀರೆಗಳ ಹಾಗೆ- ವರ್ಣ ವೈಭವ. ಕಲಾವಿದರ ಕಲ್ಪನೆಯ ಆಟ. ಹಿಂದೆಲ್ಲ ಪ್ರಾಕೃತಿಕ ಬಣ್ಣಗಳಿಂದಲೇ ಚಿತ್ರ ಬಿಡಿಸುತ್ತಿದ್ದ ಗೊಂಡರು ಈಗ ಆಧುನಿಕ ಎನಾಮಲ್ ಪೇಂಟ್ಗಳ ಮೊರೆ ಹೋಗುತ್ತಾರೆ. ವಿಶೇಷವೆಂದರೆ ಇವರೆಲ್ಲ ಕಲೆಯನ್ನು ಶಾಸ್ತ್ರೀಯವಾಗಿ ಕಲಿತವರಲ್ಲ.

ಪರಿಸರದ ನಡುವೆ ನೆಲ, ಕಾಡು, ಪ್ರಾಣಿಗಳು, ಅಲ್ಲಿನ ಕಾಲ್ಪನಿಕ ಕಥೆಗಳಿಗೆ ಹತ್ತಿರವಾಗಿ ಬದುಕುವವರಾದ್ದರಿಂದ ಅವರ ಚಿತ್ರಗಳಲ್ಲಿ ದೇಸೀತನ ಕಾಣಬಹುದು. ಕಾಡುಹಂದಿ ಚಿಗರೆ ಮರಿ, ಹುಲಿ ಸಿಂಹ ಆನೆ ಮುಂತಾಗಿ ಕಾಡು ಪ್ರಾಣಿಗಳು ಅವರ ಚಿತ್ರಗಳ ಅವಿಭಾಜ್ಯ ಅಂಗಗಳು. ಈ ಪ್ರಾಣಿಗಳಿಗೆ ಆಧುನಿಕ ಸ್ಪರ್ಶವನ್ನೋ ಇನ್ನೇನೋ ಅರ್ಥವನ್ನೊ ಕಲಾವಿದ ಕೊಟ್ಟಿರುತ್ತಾನೆ. ಉದಾಹರಣೆಗೆ ಚಿಗರೆಯ ಬಾಲವೊಂದು ಸುಂದರ ಪುಷ್ಪಭರಿತ ಲತೆಯಾಗಿ ಬದಲಾಗುತ್ತದೆ. ಹುಡುಗಿಯರ ಕೈಗಳೇ ಬಳ್ಳಿಗಳಾಗುತ್ತವೆ. ಮೇಕೆಯ ಕೋಡುಗಳು ಬಳ್ಳಿಗಳಾಗುತ್ತವೆ.

ಅವರು ಯಾವುದೇ ಚಿತ್ರ ರಚಿಸಿದರೂ ಕಾಡುಬಳ್ಳಿ ಅವರ ಜೀವನಾಡಿ. ಅವರ ಬಳ್ಳಿಗಳೇ ಇರಲಿ, ಮನುಷ್ಯನ ಆಕೃತಿಗಳೇ ಇರಲಿ, ಹಸೆ ಚಿತ್ರದ ಹಾಗೆ, ಅವಕ್ಕೊಂದು ಮಾದರಿ ಇದೆ. ಅದನ್ನು ನೋಡಿದ ಕೂಡಲೇ ಗೊಂಡ ಕಲೆಯನ್ನು ಗುರುತಿಸಬಹುದು. ಹಾಗೆಯೇ ವಾದ್ಯಮೇಳಗಳು. ಅವರು ಬಳಸುವ ವಾದ್ಯಗಳು, ಅವುಗಳನ್ನು ನುಡಿಸುವ ಹಬ್ಬಗಳು, ಸಾಂಸ್ಕತಿಕ ಸಂದರ್ಭಗಳು ಗೊಂಡಕಲೆಯಲ್ಲಿ ತಪ್ಪದೇ ಅನಾವರಣಗೊಳ್ಳುತ್ತವೆ. ಕಾಡಲ್ಲಿ ವಾಸಿಸುತ್ತಿದ್ದ ಅವರ ಬದುಕಿನಲ್ಲಿ ಬೇಟೆ ಆಹಾರಕ್ಕೂ ಸುರಕ್ಷತೆಗೂ ಅನಿವಾರ್ಯವಾಗಿತ್ತು. ಹೀಗಾಗಿ ಅವರ ಚಿತ್ರಗಳಲ್ಲಿ ಬೇಟೆಯ ವೈಭವೀಕರಣವಿದೆ. ಅದಕ್ಕೆ ಬಳಸುವ ಆಯುಧಗಳ ವರ್ಣನೆಯಿದೆ.

ಗೊಂಡಚಿತ್ರಗಳು ಎಲ್ಲೇ ಇದ್ದರೂ ಎದ್ದು ಕಾಣುವುದು ಅವುಗಳ ವರ್ಣವೈಭವ. ಒಂದೇ ಹೂವಿನ ಗೊಂಚಲಲ್ಲಿ ನೀಲಿಯಿದೆ, ಕೆಂಪಿದೆ, ಹಳದಿಯಿದೆ, ಜಾಂಬಳಿಯಿರುತ್ತದೆ. ಬಿಳಿಯ ಭಿತ್ತಿಯ ಮೇಲೆ ಅವು ಎದ್ದು ಕಾಣುತ್ತವೆ ಈ ಕಾರಣದಿಂದ, ಎಷ್ಟೇ ಮಾದರಿಯ ಚಿತ್ರಗಳ ನಡುವೆ ಇದ್ದರೂ ಗೊಂಡ ಕಲೆ ಗಮನ ಸೆಳೆಯುತ್ತದೆ.

ಸರಳೀಕರಣವನ್ನು ಗೊಂಡಕಲೆಯಲ್ಲಿ ಕಾಣಬಹುದಾದರೂ ಅವನ್ನು ಬಿಡಿಸುವುದು ಸುಲಭವಲ್ಲ. ನೈಜವಾಗಿ ಕಾಣುವ ಇವರ ಚಿತ್ರಗಳು ಏಕಾಏಕಿ ಸಂಕೀರ್ಣತೆಗೆ ಹೊರಳುತ್ತವೆ. ತರ್ಕಕ್ಕೆ ನಿಲುಕದ ಕಲ್ಪನೆಗಳತ್ತ ವಾಲುತ್ತವೆ. ಅದಕ್ಕಾಗಿ, ಗೊಂಡಕಲೆಯನ್ನು ಸರಳವೆಂದರೂ ಕಲಾವಿದ ಅಚಾನಕ್ ನೀಡುವ ಅಮೂರ್ತ ಕಲ್ಪನೆಗಳಿಗೆ ಅರ್ಥ ನೀಡುವುದು ಸುಲಭವಲ್ಲ. ಗೊಂಡರಲ್ಲಿ ಇರುವ ಒಂದು ನಂಬಿಕೆಯೆಂದರೆ ಒಳ್ಳೆಯ ಚಿತ್ರ ನೋಡುವುದರಿಂದ ಒಳ್ಳೆಯದಾಗುತ್ತದೆ ಎಂಬುದು.

ಇದೇ ಕಾರಣವಿರಬಹುದು- ಗೊಂಡಕಲೆಯಲ್ಲಿ ರಕ್ತಪಾತವಿಲ್ಲ. ಮನಸ್ಸನ್ನು ಮುದುಡಿಸುವ ಬೀಭತ್ಸ ಚಿತ್ರಗಳಿಲ್ಲ. ಅಲ್ಲಿ ನವಿಲು, ಹಂಸ, ಹಸು, ಹುಡುಗಿ ಎಲ್ಲವೂ ಚಂದ. ಮನಸ್ಸಿಗೆ ಮುದ ನೀಡುವ ಬಣ್ಣಗಳು, ಮನಸ್ಸನ್ನು ಅರಳಿಸುವ ಚಿತ್ರಗಳು. ಅದಕ್ಕೇ ಗೊಂಡಕಲೆಗೆ ಇಂದು ಜಾಗತಿಕವಾಗಿ ಅಪಾರ ಬೇಡಿಕೆಯಿದೆ. ವಿಶೇಷವೆಂದರೆ ಆಧುನೀಕತೆಯ ಸ್ಪರ್ಶದಲ್ಲಿ ಗೊಂಡಕಲೆ ವಿರೂಪಗೊಂಡಿಲ್ಲ. ಸಹಸ್ರಾರು ಹೊಸ ತಲೆಮಾರಿನ ಕಲಾವಿದರು ತಯಾರಾಗುತ್ತಿದ್ದಾರೆ. ಹೀಗಾಗಿ ಈ ಕಲೆಯನ್ನೇ ನೆಚ್ಚಿಕೊಂಡವರ ಭವಿಷ್ಯ ಉಜ್ವಲ.

LEAVE A REPLY

Please enter your comment!
Please enter your name here