Home ಕ್ಲಾಸಿಪೈಡ್ ಹಿರಿಯ ನಾಗರಿಕಗೆ ಒಂದಿಷ್ಟು ಸಲಹೆಗಳು:

ಹಿರಿಯ ನಾಗರಿಕಗೆ ಒಂದಿಷ್ಟು ಸಲಹೆಗಳು:

54
0
SHARE

ಹಿರಿಯ ನಾಗರಿಕಗೆ ಒಂದಿಷ್ಟು ಸಲಹೆಗಳು:

ವೃದ್ಧಾಪ್ಯ ಕೆಟ್ಟದ್ದು ಎನ್ನುವುದು ಲೋಕ ರೂಢಿ ಮಾತು. ನಿಮ್ಮ ಎಚ್ಚರದಲ್ಲಿ ನೀವಿದ್ದರೆ ಅದು ಅಷ್ಷೇನೂ ಕೆಟ್ಟದ್ದಾಗುವುದಿಲ್ಲ.
ಪ್ರತಿ ವರ್ಷ ಅಕ್ಟೋಬರ್ ಒಂದನೇ ದಿನಾಂಕದಂದು ‘ಹಿರಿಯ ನಾಗರಿಕರ ದಿನ’ ಆಚರಿಸಲಾಗುತ್ತಿದೆ ಆದರೆ, ಹಿರಿಯ ನಾಗರಿಕರು ಇತ್ತೀಚೆಗೆ ಬೈಗುಳ, ಅಲಕ್ಷ್ಯ, ಒಂಟಿತನ, ತ್ಯಜಿಸುವಿಕೆ ಇತ್ಯಾದಿ ತೊಂದರೆಗೆ ತುತ್ತಾಗುತ್ತಿದ್ದಾರೆ. ತಮ್ಮ ತಂದೆ, ತಾಯಿಯರ, ಪಾಲಕರ ಆರೈಕೆ, ಪೋಷಣೆ ಮಾಡಬೇಕಾದ ಮಕ್ಕಳು, ಸಂಬಂಧಿಕರು ಹಿರಿಯರನ್ನು ದೂರ ಮಾಡುತ್ತಿದ್ದಾರೆ. ಅಲಕ್ಷಿಸುತ್ತಿದ್ದಾರೆ.

ಹಿರಿಯ ನಾಗರಿಕ ಸಂಕಟಗಳನ್ನು ದೂರ ಮಾಡುವ ನಿಟ್ಟಿನಲ್ಲಿ ಸರ್ಕಾರವು, ಪಾಲಕರ ಮತ್ತು ಹಿರಿಯ ನಾಗರಿಕರ ಪೋಷಣೆ ಹಾಗೂ ಕಲ್ಯಾಣ ಕಾಯಿದೆ 2007 ಎಂಬ (ಕೇಂದ್ರ ಸರ್ಕಾರದ) ಕಾನೂನನ್ನು, 2009 ರಲ್ಲಿ ಕರ್ನಾಟಕ ಸರ್ಕಾರದ ರಾಜ ಪತ್ರ (ಗಜೆಟ್)ದಲ್ಲಿ ಪ್ರಕಟಿಸಿ, 2009 ರಿಂದ ಜಾರಿಗೆ ತಂದಿದೆ.

ಈ ಕಾಯಿದೆಯ ಸೆಕ್ಷನ್ 40ರ ಅನ್ವಯ ನೊಂದ ಪಾಲಕರು, ಹಿರಿಯ ನಾಗರಿಕರು, ಪೋಷಕಾಂಶಕ್ಕಾಗಿ ಅರ್ಜಿ ಸಲ್ಲಿಸಿ, ನ್ಯಾಯಾಲಯದ ಪ್ರಾಧಿಕಾರ (ಟ್ರಿಬ್ಯೂನಲ್) ಮೂಲಕ ಮೂಲಕ ವಾರೀಸುದಾರರಿಂದ ಪೋಷಕಾಂಶ ಪಡೆಯಬಹುದು. ಸದರಿ ಪ್ರಾದಿಕಾರ ಅರ್ಜಿದಾರರಿಗೆ ಮಾಹೆಯಾನ ನಗದು ರೂ. ಹತ್ತು ಸಾವಿರದವರೆಗೆ ಜೀವನಾಂಶ ಕೂಡಿಸಬಹುದು. ಪಾಲಕರು/ಹಿರಿಯ ನಾಗರಿಕರು ಈ ಕಾಯ್ದೆಯ ಪ್ರಯೋಜನ ಪಡೆಯಬಹುದು. ಅಥವಾ ಕ್ರಿಮಿನಲ್ ಪ್ರೊಸೀಜರ್ ಕೋಡ್ನ ಪ್ರಕಾರವೂ (ಸೆಕ್ಷನ್ 125) ಮೊಕದ್ದಮೆ ಹೂಡಬಹುದು.

ತಮ್ಮನ್ನು ತಾವೇ ಸಾಧ್ಯವಾದಷ್ಟು ಮಟ್ಟಿಗೆ ನೋಡಿಕೊಳ್ಳುವುದನ್ನೂ ಹಿರಿಯರು ಕಲಿತುಕೊಳ್ಳಬೇಕು. ಮುಖ್ಯವಾಗಿ ಆರೋಗ್ಯ ರಕ್ಷಣೆಗೆ ಸಂಬಂಧಿಸಿ ಹೆಚ್ಚು ಕಾಳಜಿ ವಹಿಸಬೇಕು. ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುವಷ್ಟು ಆರೋಗ್ಯ ಇದ್ದರೆ ಸಾಕಷ್ಟು ಸಮಸ್ಯೆಗಳು ದೂರವಾಗುತ್ತವೆ. ಈ ನಿಟ್ಟಿನಲ್ಲಿ ಹಿರಿಯ ನಾಗರಿಕರಿಗೆ ತಗಲಬಹುದಾದ ಕಾಮಾಲೆ (ಹೆಪೆಡೈಡಿಸ್ ಎ ಮತ್ತು ಬಿ ವೈರಸ್ನಿಂದ ಬರುವವು) ಮತ್ತಿತರ ಕಾಯಿಲೆಗಳಿಗೆ ಸೂಕ್ತ ಕಾಲದಲ್ಲಿ ಲಸಿಕೆ ಹಾಸಿಕೊಳ್ಳಬೇಕು. (ಈ ಲಸಿಕೆಗಳ ವಿತರಕರ ಮೊಬೈಲ್ ದೂರವಾಣಿ ಸಂಖ್ಯೆ: 9845865703/ 9845865703 ಸದಾ ನೆನಪಿನಲ್ಲಿ ಇಟ್ಟುಕೊಳ್ಳಿ.)

ಹಿರಿಯನಾಗರಿಕರು, ಪಾಲಕರು/ಪೋಷಕರು ನೆಮ್ಮದಿಯಿಂದ ಬದುಕಲು ಅನುಕೂಲವಾಗುವಂತಹ ಕೆಲವು ವೈಯಕ್ತಿಕ ಸಲಹೆಗಳು:

• ನಿಮ್ಮವರು ನಿಮ್ಮನ್ನು ಅಲ್ಯಕ್ಷ್ಯ ಮಾಡಿ ತೊಂದರೆ ಕೊಟ್ಟಾಗ ತಲೆ ಮೇಲೆ ಕೈ ಇಟ್ಟುಕೊಂಡು ‘ನನ್ನ ಪೂರ್ವಜನ್ಮದ ಕರ್ಮ’ ಎಂದೋ, ಇನ್ನೇನೋ ಹೇಳಿಕೊಂಡೋ, ಸುಮ್ಮನೇ ಕೂರಬೇಡಿ. ಸೂಕ್ತ ಕಾನೂನು ಕ್ರಮ ಕೈಗೊಳ್ಳಿ.
• ಬದುಕಿನಲ್ಲಿ ಸಕಾರಾತ್ಮಕ ಭಾವನೆ ಬೆಳೆಸಿಕೊಳ್ಳಿ. ವೃದ್ಧಾಪ್ಯ ಸಹಜ ಹಾಗೂ ಅನಿವಾರ್ಯ ಆಗಿರುವುದರಿಂದ ಅದನ್ನು ನಮ್ರತೆಯಿಂದ ಸ್ವೀಕರಿಸಿ, ಆನಂದದಿಂದ ಮುಂದಿನ ಬದುಕನ್ನು ಸಾಗಿಸಿ.
• ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ – ಸಾವಯವ ಆಹಾರ, ಮಿತವಾದ ವ್ಯಾಯಾಮ, ಯೋಗ ಸಹಾಯಕಾರಿ. ಕುಡಿತ, ಧೂಮಪಾನ ದೂರವಿರಲಿ. ರೋಗಗಳಿಂದ ದೂರವಿರಲು ಕ್ಯಾಲರಿ ನಿಯಂತ್ರಿಸುವ ಮಿತ ಆಹಾರ ಸೇವನೆ ರೂಢಿಸಿಕೊಳ್ಳಿ.
• ಆಧ್ಯಾತ್ಮಿಕ ಜೀವನದತ್ತ ಒಲವಿರಲಿ, ಪ್ರಾರ್ಥನೆ, ಪಾರಮಾರ್ಥಿಕ ಚಿಂತನೆ ಮೂಲಕ ಮನಸ್ಸನ್ನೂ ಶಾಂತಗೊಳಿಸಿ, ದೇಹವನ್ನು ಬಲಪಡಿಸಿ.

• ಆಗಾಗ ನಗುವುದನ್ನು ಅಭ್ಯಸಿಸಿ. ಅದರಿಂದ ದೇಹಕ್ಕೆ ವ್ಯಾಯಾಮ ದೊರೆಯುವುದು. ರೋಗ ನಿರೋಧಕ ಶಕ್ತಿಯೂ ಹೆಚ್ಚುವುದು.
• ಜೀವನದ ಭೂತಕಾಲ, ಭವಿಷ್ಯತ್ಕಾಲದ ಬಗ್ಗೆ ಸದಾ ಚಿಂತಿಸದೇ, ‘ವರ್ತಮಾನ’ದ ವಿಚಾರಗಳಿಗೆ ಗಮನ ಹರಿಸಿ.
• ಸರಳ ಜೀವನ ನಡೆಸಿ. ಆದಾಯಕ್ಕೂ ಖರ್ಚಿಗೂ ‘ತಾಳ ಮೇಳ’ ಇರಲಿ.
• ಬದುಕಿಗಾಗಿ ಹೆಚ್ಚಿನ ಆದಾಯ ಬೇಕಿದ್ದರೆ ಮಾತ್ರ ಯಾವುದಾದರೂ ಉದ್ಯೋಗ ಆರಿಸಿಕೊಳ್ಳಿ. ಬದುಕನ್ನು ಸುಂದರವಾಗಿದಸಲು ಸಾಹಿತ್ಯ, ಸಂಗೀತ, ಕಲೆ, ಓದು, ತೋಟಗಾರಿಕೆಯಂತಹ ಹವ್ಯಾಸ ಬೆಳೆಸಿಕೊಳ್ಳಿ.

• ವಯಸ್ಕ ಶಿಕ್ಷಣ, ವೃದ್ಧಾಶ್ರಮ, ಅನಾಥಾಶ್ರಮಗಳಂತಹ ಸಂಸ್ಥೆಗಳ ಸಂಪರ್ಕದಲ್ಲಿರಿ
• ಬೆನ್ನು ನೆಟ್ಟಗಿರುವಂತೆಯೇ ಯಾವಾಗಲೂ ಕುಳಿತುಕೊಳ್ಳಿ.
• ರಾತ್ರಿ ಮಲಗುವಾಗ ಬ್ಯಾಟರಿ ಪಕ್ಕದಲ್ಲಿರಲಿ.
• ಸ್ನಾನದ ಮನೆಯಲ್ಲಿ ಅವಸರ ಬೇಡ, ಜಾರಿ ಬೀಳದಂತೆ ಎಚ್ಚರವಹಿಸಿ.
• ಪಾದರಕ್ಷೆಗಳು ಆದಷ್ಟು ಮೆದುವಾಗಿದ್ದು, ನಿಮ್ಮನ್ನು ರಕ್ಷಿಸುವಂತಿರಲಿ .
• ಅಗತ್ಯವಿದ್ದಾಗ ಮಾತ್ರ ಕನ್ನಡಕ ಧರಿಸಿ.
• ಪಾದಚಾರಿಗಳ ರಸ್ತೆಯಲ್ಲೇ ನಡೆಯಿರಿ. ರಸ್ತೆಯ ಬಲಭಾಗದಲ್ಲಿ ನಡೆಯುವುದರಿಂದ ಎದುರಿನ ಕಡೆಯಿಂದ ಬರುವ ವಾಹನಗಳ ಅವಘಡಗಳಿಂದ ತಪ್ಪಿಸಿಕೊಳ್ಳಬಹುದು; ಹಾಗಾಗಿ ರಸ್ತೆಯ ಎಡಭಾಗದಲ್ಲಿ ನಡೆಯುವುದನ್ನು ಕೂಡಲೇ ನಿಲ್ಲಿಸಿ, ಬಲಭಾಗದಿಂದ ನಡೆಯುವುದನ್ನು ರೂಢಿಸಿಕೊಳ್ಳಿ.

• ರಸ್ತೆ ದಾಟುವಾಗ ಹುಶಾರಾಗಿರಿ. ದಾರಿಹೋಕರ ಸಹಾಯ ಪಡೆಯಲು ಮುಜುಗುರ ಪಡಬೇಡಿ.
• ಏಣಿ, ಸ್ಟೂಲು ಇತ್ಯಾದಿ ಹತ್ತುವಾಗ ಜಾಗ್ರತೆ ಇರಲಿ. ನಿಧಾನಕ್ಕೆ ಹೆಜ್ಜೆ ಇಡಿ. ಇಂಥ ಸಮಯದಲ್ಲಿ ಯಾರಾದರೂ ಏಣಿ, ಸ್ಟೂಲ್ ಹಿಡಿದುಕೊಂಡರೆ ಒಳಿತು.
• ಬೆಳಗಿನ ಹೊತ್ತಿನ ವಾಯುವಿಹಾರ ಸರ್ವ ಶ್ರೇಷ್ಠ. ಆಗ ವಾತಾವರಣದಲ್ಲಿ ಪ್ರಾಣವಾಯುವಿನ ಅಂಶ ಅಧಿಕವಾಗಿರುತ್ತದೆ ಮತ್ತು ವಾಹನಗಳಿಂದ ಅವಘಾತವಾಗುವ ಸಂಭವವೂ ಕಡಿಮೆಯೇ.
• ಮೆಟ್ಟಿಲನ್ನು ಹತ್ತುವಾಗ, ಇಳಿಯುವಾಗ, ನಿಮ್ಮನೆಯಲ್ಲೇ ಆಗಲಿ, ಬೇರೆ ಸ್ಥಳದಲ್ಲಿಯೇ ಆಗಲಿ, ಆಧಾರಪಟ್ಟಿ ಹಿಡಿದು ಆಧರಿಸಿಕೊಳ್ಳಿ. ಪ್ರತಿ ಹೆಜ್ಜೆಯನ್ನು ಜಾಗೃತವಾಗಿ ಇಡಿ.

• ಪ್ರಮಾಣದ ವೇಳೆ ಕನಿಷ್ಠ ಲಗ್ಗೇಜ್ ಇದ್ದರೆ ಅನುಕೂಲ
• ವೃದ್ಧಾಪ್ಯದಲ್ಲಿ ಲೈಂಗಿಕತೆಗೆ ನಿಷೇಧವಿಲ್ಲ-ತಜ್ಞವೈದ್ಯರ ಅಂಬೋಣ.
• ಮನೆಯವರ ಮನೆಗೆಲಸದಲ್ಲಿ ಆದಷ್ಟು ಸಹಾಯ ಮಾಡಿ, ಹೆಚ್ಚಿನ ಸಮಯ ನಿಮ್ಮ ಮನೆಯವರೊಂದಿಗೇ ಕಳೆಯಿರಿ.
• ನಿಮ್ಮ ನಂತರ ನಿಮ್ಮ ಸ್ವಯಾರ್ಜಿತ ಆಸ್ತಿಗೆ ಯಾರು ಯಾರು ವಾರೀಸುದಾರರು ಎಂಬ ಬಗ್ಗೆ ಉಯಿಲು ಬರೆದಿಡಿ. ಹಾಗೂ ನಿಮ್ಮ ಆಪ್ತರೊಬ್ಬರಿಗೆ ಈ ಬಗ್ಗೆ ಮಾಹಿತಿ ನೀಡಿರಿ.
• ಮಕ್ಕಳು ಅಥವಾ ಸಂಬಂಧಿಗಳ ಜೊತೆಗೆ ವಾಸಿಸುತ್ತಿದ್ದಲ್ಲಿ ಹೊಂದಾಣಿಕೆಯಿಂದ ಬಾಳಿ-ತಾಳ್ಮೆಯಿಂದ ಬದುಕಿ.
• ಮಕ್ಕಳು ಕೇಳಿದಾಗ ಮಾತ್ರ ಅವರಿಗೆ ಸಲಹೆ/ಹಿತವಚನ ನೀಡಿ. ಅವರ ಪ್ರತಿಯೊಂದು ಕೆಲಸಗಳಲ್ಲೂ ಮೂಗು ತೂರಿಸಬೇಡಿ.
• ಮಕ್ಕಳು ಮತ್ತಿತರರಿಂದ ಏನನ್ನೂ ನಿರೀಕ್ಷಿಸಬೇಡಿ. ಅವರಿಗೆ ಬೇಕಾದಂತೆ ಬಾಳಲು ಬಿಟ್ಟುಬಿಡಿ – ನೀವು ನಿಮಗೆ ಬೇಕಾದಂತೆ ಬದುಕಿ ಸುಖವಾಗಿರಿ.

• ನಿಮ್ಮ ಜೀವ ವಿಮಾ ಪಾಲಿಸಿಗಳು, ಮುದ್ರಿತ ಠೇವಣಿ ರಶೀದಿಗಳು, ಷೇರು ಇತ್ಯಾದಿಗಳನ್ನು ಎಲ್ಲಿ ಇಟ್ಟಿರುತ್ತೀರಿ ಎಂದು ನಿಮ್ಮ ಆಪ್ತರೊಬ್ಬರಿಗೆ ಮರೆಯದೇ ತಿಳಿಸಿರಿ.
• ಬ್ಯಾಂಕಿನಲ್ಲಿ ಖಾತೆಗಳನ್ನು, ನಿಮ್ಮ ಲಾಕರ್ಗಳನ್ನು ಹಾಗು ಇಂತಹ ಇತರ ವಸ್ತುಗಳನ್ನು ಆದಷ್ಟು ನಿಮ್ಮ ಪತ್ನಿಯ ಜೊತೆಗೇ ಜಂಟಿ ಖಾತೆಯಲ್ಲಿರಿಸಿ.
• ಯಾವುದೇ ಕಾರಣಕ್ಕೂ ಯಾರಿಗೂ ಸಾಲ ಕೊಡಬೇಡಿ- ಯಾರಿಗೂ ಜಾಮೀನು ಆಗಬೇಡಿ.
ವೃದ್ಧಾಪ್ಯ ಕೆಟ್ಟದ್ದು ಎನ್ನುವುದು ಲೋಕರೂಢಿಯ ಮಾತು. ಆದರೆ ನಿಮ್ಮ ಎಚ್ಚರದಲ್ಲಿ ನೀವಿದ್ದರೆ ಅದು ಅಷ್ಟೇನೂ ಕೆಟ್ಟದ್ದಾಗುವುದಿಲ್ಲ. 85 ದಾಟಿದ ಎಷ್ಟೋ ವೃದ್ಧರು ನೆಮ್ಮದಿ ಮತ್ತು ಸಂತೋಷದಿಂದ ಬದುಕುತ್ತಿದ್ದಾರೆ. ಇಳಿವಯಸ್ಸಿನಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯಗಳನ್ನು ಕಾಪಾಡಿಕೊಂಡು ಬದುಕುವುದು ಹೆಚ್ಚು ಮುಖ್ಯ.

LEAVE A REPLY

Please enter your comment!
Please enter your name here