Home ಕ್ಲಾಸಿಪೈಡ್ ಉಳಿತಾಯದ ರಹಸ್ಯ:

ಉಳಿತಾಯದ ರಹಸ್ಯ:

39
0
SHARE

ಉಳಿತಾಯದ ರಹಸ್ಯ:
ಒಂದು ದಿನ, ಸೀಮಾಳ ಪುಟಾಣಿ ಮಗಳು ಕವಿತಾಳ ಆರೋಗ್ಯ ಆಕಸಿಕ್ಮವಾಗಿ ಹದಗೆಟ್ಟುಹೋಯಿತು. ಅಂದು ಭಾನುವಾರವಾಗಿದ್ದರಿಂದ ಬ್ಯಾಂಕ್ಗಳು ಕೂಡ ರಜೆ. ಇವರ ಮನೆ ಎಕ್ಸ್ಟೆನ್ಶನ್ ಏರಿಯಾದಲ್ಲಿ ಇದ್ದುದರಿಂದ, ಹತ್ತಿರದಲ್ಲೆಲ್ಲೂ ಎಟಿಯಂ ಸಹ ಇರಲಿಲ್ಲ. ಮನೆಯಲ್ಲಿ ಸುಮಾರು ಏಳು ನೂರು ರೂಪಾಯಿ ಮಾತ್ರ ಇತ್ತು. ಸೀಮಾಳ ಪತಿ ವಿವೇಕ್ನ ಮುಖದ ಮೇಲೆ ಚಿಂತೆಯ ಗೆರೆ ಮೂಡತೊಡಗಿದವು. ಈಗ ಯಾರ ಹತ್ತಿರವಾದರೂ ಸಾಲ ಕೇಳುವುದೇ ಸೂಕ್ತ. ಆದರೆ ಸಾಲ ಕೊಡುವವರಾದರೂ ಯಾರು? ಎಂದು ಯೋಚನೆಗೆ ಬಲಿಯಾದನು.

ಪತಿಯ ತೊಳಲಾಟ ಕಂಡು ಸೀಮಾ “ಚಿಂತೆ ಮಾಡಬೇಡಿ, ನನ್ನ ಬಳಿ ಸ್ವಲ್ಪ ಹಣ ಇದೆ. ಅದರಿಂದ ಅನುಕೂಲ ಆಗುತ್ತೆ,” ಎಂದು ಧೈರ್ಯ ತುಂಬಿದಳು. ವಿವೇಕ್ ತನ್ನ ನಿಸ್ಸಹಾಯಕ ಕಣ್ಣುಗಳನ್ನು ಅವಳತ್ತ ತಿರುಗಿಸಿ, “ಅರೆ, ನಿನ್ನ ಬಳಿ ಹಣ ಹೇಗೆ ಬಂದಿತು? ನಾನು ಮನೆ ಖರ್ಚಿಗೆ ಅಂತ ಕೊಡುವ ಹಣವೆಲ್ಲ ಮನೆ ನಿಭಾಯಿಸುವುದಕ್ಕೆ ಖರ್ಚಾಗಿಬಿಡುತ್ತದಲ್ಲಾ..?” ಎಂದು ಆಶ್ಚರ್ಯದಿಂದ ಕೇಳಿದ. ಅದಕ್ಕೆ ಸೀಮಾ, ”ಪ್ರತಿ ತಿಂಗಳೂ ನೀವು ಕೊಡುತ್ತಿದ್ದ ಹಣದಲ್ಲಿ ಸ್ವಲ್ಪ ದುಡ್ಡನ್ನು ಸೇವಿಂಗ್ಸ ಅಂತ ಎತ್ತಿ ಇಟ್ಟಿರುತ್ತಿದೆ.

ಅದೇ ಈಗ ಉಪಯೋಗವಾಗುತ್ತಿದೆ,” ಎಂದು ಹೇಳಿದಳು. ಹೆಂಡತಿಯ ಜಾಣ್ಮೆಯನ್ನು ಮೆಚ್ಚಿಕೊಂಡು, ಹೃದಯ ತುಂಬಿದಂತಾಗಿ ಅವಳನ್ನು ಆಲಿಂಗಿಸಿಕೊಳ್ಳುತ್ತ, “ಸೀಮಾ, ಇನ್ನೋಬ್ಬರ ಎದುರಿಗೆ ಕೈ ಚಾಚುವುದನ್ನು ತಪ್ಪಿಸಿದೆಯಲ್ಲ. ಥ್ಯಾಂಕ್ಯೂ..! ಎಂದು ಉಸುರಿದ. ಇದೇ ರೀತಿ ಒಂದು ದಿನ ರಾತ್ರಿ ಪ್ರಿಯಾಂಕಾಳ ಅತ್ತೆ ಶ್ವಾಸಕೋಶದ ಸಮಸ್ಯೆಯಿಂದಾಗಿ, ಉಸಿರಾಟದಲ್ಲಿ ತೊಂದರೆ ಅನುಭವಿಸ ತೊಡಗಿದರು. ಅಚಾನಕ್ಕಾಗಿ ಬಂದು ಎರಗಿದ ಎಮರ್ಜೆನ್ಸಿಯಿಂದ ಪ್ರಿಯಾಂಕಾ ದಿಗ್ಭ್ರಾಂಳಾದಳು. ಪತಿ ಬೇರೆ ಬಿಸ್ನೆಸ್ ಟೂರ್ಗೆ ಹೋಗಿದ್ದರಾದರೂ, ಆ ಅಲ್ಪ ಮೊತ್ತದಲ್ಲಿ ಆಸ್ಪತ್ರೆ ಖರ್ಚು ವೆಚ್ಚ ಸರಿದೂಗಿಸುವುದು ಸಾಧ್ಯವಿರಲಿಲ್ಲ.

ಅಷ್ಟರಲ್ಲೇ ನೆರೆಮನೆ ಶೀಲಮ್ಮ ಬಂದು, ಆಂಬುಲೆನ್ಸ್ಗೆ ಪೋನ್ ಮಾಡಿ ಇವಳ ಅತ್ತೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ಎಲ್ಲ ತಯಾರಿ ಮಾಡತೊಡಗಿದರು. ಪ್ರಿಯಾಂಕಾ ತಾನು ಉಳಿತಾಯ ಮಾಡಿ ತೆಗೆದಿಟ್ಟ ಎಲ್ಲ ಹಣವನ್ನು ಸೇರಿಸಿ ಲೆಕ್ಕ ಹಾಕಿದಾಗ 10 ಸಾವಿರ ರೂ. ಗಿಂತಲೂ ಹೆಚ್ಚಿಗೆ ಇತ್ತು. ನಿರಾಳವಾದ ಪ್ರಿಯಾಂಕಾ ಸರಿಯಾದ ಸಮಯಕ್ಕೆ ಅತ್ತೆಯನ್ನು ಆಸ್ಪತ್ರೆಗೆ ಕರೆದೊಯ್ದು ಸೂಕ್ತ ಚಿಕೆತ್ಸೆ ಕೊಡಿಸಿ, ಪ್ರಾಣಾಪಾಯದಿಂದ ಪಾರು ಮಾಡಿದಳು. ವಿಷಯ ತಿಳಿದು ಮರುದಿನ ಬಂದ ಅವಳ ಪತಿ,”ಅದ್ಹೇಗೆ ಮಾರಾಯ್ತಿ ಇಷ್ಟೊಂದು ಹಣ ಹೊಂಚಿದೆ..? ಯಾರಿಂದಲಾದರೂ ಸಾಲ ತೆಗೆದುಕೊಂಡೆಯಾ..?” ಎಂದು ಕೇಳಿದ. ಎಲ್ಲ ವಿಷಯವನ್ನು ವಿವರಿಸಿದ ಪ್ರಿಯಾಂಕಾಳ ಉಳಿತಾಯದ ರೂಢಿಯನ್ನು ಮನಸಾರೆ ಹೊಗಳಿದ.

ಉಳಿತಾಯದ ನೆಮ್ಮದಿ
‘ಹನಿ ಹನಿ ಕೂಡಿದರೆ ಹಳ್ಳ’ ಎಂಬತೆ ಚಿಕ್ಕಪುಟ್ಟ ಉಳಿತಾಯಗಳು ನಮ್ಮನ್ನು ಕಷ್ಟಕಾಲದಲ್ಲಿ ಕಂಗೆಡಿಸುವ ಸಂಕಷ್ಟಗಳಿಂದ ಪಾರುಮಾಡುತ್ತವೆ. ಖಾಸಗಿ ಬ್ಯಾಂಕ್ನ ನಿವೃತ್ತ ಅಧಿಕಾರಿಯಾದ ವಿಶ್ವನಾಥ್ ದೇಶಪಾಂಡೆಯವರು ಹೇಳುವಂತೆ, “ಸಣ್ಣ ಉಳಿತಾಯದಿಂದ ದೊಡ್ಡ ಸಮಸ್ಯೆಗಳನ್ನೇ ಪರಿಹರಿಸಬಹುದು. ಹಿಂದಿನ ಕಾಲದಲ್ಲಿ ಉಳಿತಾಯ ಮಾಡಲೆಂದೇ ಮಣ್ಣಿನ ಕುಡಿಕೆಗಳನ್ನು ಬಳಸುತ್ತಿದ್ದರು. ಹೀಗಾಗಿ ನಾವು ನಮ್ಮ ಮಕ್ಕಳಿಗೂ ಉಳಿತಾಯದ ಮಹತ್ವವನ್ನು ತಿಳಿಸಿ ಆ ಅಭ್ಯಾಸವನ್ನು ರೂಢಿ ಮಾಡಬೇಕು.

ಅವರಿಗೆ ಪಾಕೆಟ್ಮನಿಯಲ್ಲಿಯೇ 5-10% ದುಡ್ಡನ್ನು ತೆಗೆದು ಹುಂಡಿಗೆ ಹಾಕಿ ಕೂಡಿಡಲು ತಿಳಿವಳಿಕೆ ನೀಡಬೇಕು. “ನಮ್ಮ ಮಧ್ಯಮ ವರ್ಗದ ಸಾಕಷ್ಟು ಗೃಹಿಣಿಯರು ತಮ್ಮ ಗಂಡದಿರ ಕಣ್ಣು ತಪ್ಪಿಸಿ ಭಾಗಶಃ ಉಳಿತಾಯವನ್ನು ಮಾಡಿರುತ್ತಾರೆ. ಅಲ್ಲದೇ, ಸಂದಿಗ್ಧ ಪರಿಸ್ಥಿತಿಯಲ್ಲಿ ಆ ಹಣವನ್ನು ಗಂಡಂದಿರಿಗೆ ಕೊಟ್ಟು ಸಹಾಯ ಕೂಡ ಮಾಡುತ್ತಾರೆ. ಅದೇ ಧಾಟಿಯಲ್ಲಿ ಅನುಪಮಾರಿಗೆ ಆದ ಅನುಭವವೊಂದು ಎಲ್ಲ ಮಾನಿನಿಯರಿಗೆ ಉಳಿತಾಯದ ಪಾಠವನೇ ಕಲಿಸಬಹುದು. ಮದುವೆಯಾದ ನಂತರ ರಾಜೇಶ ಮತ್ತು ಅನುಪಮಾ ಹನಿಮೂನ್ಗೆಂದು ಸಿಂಗಾಪುರಕ್ಕೆ ಹೋಗಿದ್ದರು. ಹಾಂಕಾಂಗ್, ಮಲೇಷ್ಯಾ ಎಲ್ಲವನ್ನೂ ಸುತ್ತಾಡಿಕೊಂಡು ಬರುವಷ್ಟರಲ್ಲಿ ಏಳು ದಿನಗಳೇ ಕಳೆದಿದ್ದವು. ಇಬ್ಬರೂ ಚೆನ್ನಾಗಿಯೇ ಎಂಜಾಯ್ ಮಾಡಿದ್ದರು.

ದೊಡ್ಡ ಹೋಟೆಲ್ನಲ್ಲಿ ಉಳಿದುಕೊಂಡಿದ್ದು, ಸಾಕಷ್ಟು ಶಾಪಿಂಗ್ ಕೂಡ ಮಾಡಿದ್ದರು. ವಾಪಸ್ಸಾಗುವ ಹಿಂದಿನ ದಿನ ಅನುಪಮಾ ತನ್ನ ಗಂಡನ ಮುಖದಲ್ಲಿದ್ದ ಚಿಂತೆಯನ್ನು ಕಂಡಳು. ವಿಷಯ ಏನೆಂದು ಕೇಳಿದಾಗ ಅವನ ಬಳಿಯಿದ್ದ ದುಡ್ಡೆಲ್ಲ ಖರ್ಚಾಗಿತ್ತು. ರೂಮ್ ಬಾಡಿಗೆ ಮತ್ತು ಫ್ಲೈಟ್ ಚಾರ್ಜಿಗೆ ಆಗುವಷ್ಟೇನೋ ಇತ್ತು. ಆದರೆ ದೂರದ ದಾರಿ, ಕೈ ಖರ್ಚಿಗೆ ಅಂತ ಒಂದಿಷ್ಟೂ ಉಳಿದಿರಲಿಲ್ಲ. ಪತಿಯ ತಳಮಳವನ್ನು ಕಂಡ ಅನುಪಮಾ ನಸುನಗುತ್ತಾ ತನ್ನ ಪರ್ಸಿನಿಂದ 7 ಸಾವಿರ ರೂ.ಗಳನ್ನು ತೆಗೆದುಕೊಟ್ಟಳು. ತನ್ನ ಪತಿ ಖರ್ಚು ಮಾಡುವುದರಲ್ಲಿ ತುಂಬಾ ಧಾರಾಳಿಯೆಂದು ತಿಳಿದು ಅಲ್ಪಸ್ವಲ್ಪ ಹಣ ಉಳಿತಾಯ ಮಾಡಿದ್ದಳು ಅನುಪಮಾ.

ಉಳಿತಾಯ ಅಸಾಧ್ಯೇನಲ್ಲ!
‘ಪರಿವಾರಗಳಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಖರ್ಚು-ವೆಚ್ಚದ ಒತ್ತಡಗಳಲ್ಲಿ ಉಳಿತಾಯ ಮಾಡುವುದು ತುಂಬಾ ಕಷ್ಟ ಸಾಧ್ಯ’ ಎಂದು ಬಹುತೇಕ ಮಹಿಳೆಯರು ವಾದಿಸುತ್ತಾರೆ. ‘ಕುಟುಂಬ ನಡೆಸೋದೇ ಕಷ್ಟ ಆಗಿರುವಾಗ, ಇನ್ನು ಉಳಿತಾಯ ಮಾಡುವ ಯೋಚನೆಯಾದ್ರೂ ಹೇಗೆ ಬಂದಿತು?’ ಎಂದು ಹೇಳಬಹುದು. ಮುಖ್ಯವಾಗಿ ಮಧ್ಯಮ ವರ್ಗದವರಲ್ಲಿ ಹಾಲು, ಗ್ಯಾಸು, ತರಕಾರಿ, ಮಕ್ಕಳ ಫೀಸು, ಔಷಧ ಖರ್ಚು, ದಿನಸಿ ಸಾಮಾನು, ಕರೆಂಟ್/ ವಾಟರ್ ಬಿಲ್, ಮನೆ ಬಾಡಿಗೆ.. ಎಲ್ಲಾ ನೀಗಿಸುವಷ್ಟರಲ್ಲಿ ಕೈ ಖಾಲಿಯಾಗಿರುತ್ತದೆ. ಇಂತಹುದೇ ಯೋಚನೆಗಳಲ್ಲಿರುವ ಎಲ್ಲರಿಗೂ ಬೃಹತ್ ಫೈನಾನ್ಸ್ ಕಂಪನಿಯ ನಿರ್ದೆಶಕ ವೆಂಕಟೇಶ್ ಹೇಳುತ್ತಾರೆ, “ಉಳಿತಾಯ ಮಾಡಲೇಬೇಕೆಂಬ ಸಂಕಲ್ಪ ಮಾಡುವವರಿಗೆ ಇದು ಬಹು ಸುಲಭ.

ಮಧ್ಯಮ ವರ್ಗದ ಕುಟುಂಬಗಳಲ್ಲಿ ಸಂಬಳ ಬಂದ ಕೂಡಲೇ ಎಲ್ಲ ಖರ್ಚಾಗುವುದು ಸಹಜ. ಆದರೆ ದಿನಂಪ್ರತಿ 10-20 ರೂಪಾಯಿಯೋ ಅಥವಾ ತಿಂಗಳಿಗೆ 500-1000 ರೂಪಾಯಿಯನ್ನೋ ಖಂಡಿತ ಉಳಿತಾಯ ಮಾಡಬಹುದು.“ಕೆಲ ಮಹಿಳೆಯರು, ಎಲ್ಲಾ ಖರ್ಚಗಳ ನಂತರವೂ ಕೊಂಚವಾದರೂ ಉಳಿತಾಯ ಮಾಡಿಯೇ ಇರುತ್ತಾರೆ. ಮನೆಯ ಕರ್ಚುಗಳಿಗಂತೂ ಕೊನೆಯೇ ಇರುವುದಿಲ್ಲ. ಒಂದಾದ ಮೇಲೊಂದರಂತೆ ಖರ್ಚು ಎದುರಾಗುತ್ತಲೇ ಇರುತ್ತವೆ.

ಇಷ್ಟಾದರೂ ಉಳಿತಾಯ ಮಾಡಲೇ ಬೇಕೆಂದು ದೃಢ ನಿರ್ಧಾರ ಹೊಂದಿದ್ದರೆ ಸ್ವಲ್ಪ ಉಳಿತಾಯ ಮಾಡುವುದು ಸುಲಭ.” ಪ್ರತಿಯೊಬ್ಬ ಮಹಿಳೆಯೂ ಒಂದಿಷ್ಟಾದರೂ ಉಳಿತಾಯ ಮಾಡುವ ಹವ್ಯಾಸವನ್ನು ರೂಢಿ ಮಾಡಿಕೊಳ್ಳಲೇಬೇಕು. ಮಹಿಳೆಯರಷ್ಟೇ ಅಲ್ಲ, ಪುರುಷರು ಮತ್ತು ಮಕ್ಕಳಲ್ಲೂ ಈ ಹವ್ಯಾಸ ಸಾಂಕ್ರಾಮಿಕವಾಗಬೇಕು. ಇದರಿಂದಾಗಿ, ಆಕಸ್ಮಿಕವಾಗಿ ಬಂದೆರಗುವ ಹಣಕಾಸಿನ ಬಿಕ್ಕಟ್ಟುಗಳನ್ನು ನಿರಾಯಸವಾಗಿ ಎದುರಿಸಬಹುದು.

ಹೀಗೆ ಉಳಿತಾಯ ಮಾಡಿ:
• 2,1 ಮತ್ತು 5 ರೂ. ನಾಣ್ಯಗಳನ್ನು ಕೂಡಿಡಲು ಒಂದು ಗೋಲಕ, ಹುಂಡಿ ಅಥವಾ ಹಳೆಯ ಪ್ಲಾಸ್ಟಿಕ್ ಪೌಡರ್ ಡಬ್ಬಿಯ ವ್ಯವಸ್ಥೆ ಮಾಡಿ.
• ಪತಿ ಆಫೀಸಿನಿಂದ ಮರಳಿ ಮನೆಗೆ ಬಂದಾಗ, ಅಂದು ಮಿಕ್ಕಿದ ಎಲ್ಲ ನಾಣ್ಯಗಳನ್ನೂ ಇದರೊಳಗೆ ಹಾಕಲು ಪ್ರೇರೇಪಿಸಿ.
• ಮಕ್ಕಳ ಪಾಕೆಟ್ ಮನಿಯಲ್ಲಿ ಉಳಿದಿರುವ ನಾಣ್ಯಗಳನ್ನು ಹುಂಡಿಗೆ ಹಾಕಿ ಕೂಡಿಡಲು ತಿಳಿವಳಿಕೆ ನೀಡಿ.
• ಸದ್ಯಕ್ಕೆ ಅವಶ್ಯವಿಲ್ಲದಿರುವ ಯಾವುದೇ ವಸ್ತುವನ್ನು, ಅದೆಷ್ಟೇ ಕಡಿಮೆ ದರದಲ್ಲಿ ಸಿಗುವುದಿದ್ದರೂ ಖರೀದಿಸಬೇಡಿ.
• ಮನೆಯ ಮಾಸಿಕ ಬಜೆಟ್ನಿಂದ ಕೊಂಚ ದುಡ್ಡನ್ನು ಎತ್ತಿ ನಿಮ್ಮ ಉಳಿತಾಯ ಖಾತೆಗೆ ಜಮಾಯಿಸುವುದನ್ನು ಮರೆಯದಿರಿ.
• ಬ್ಯಾಂಕ್ಗಳಲ್ಲಿ ರೆಕರಿಂಗ್ ಡೆಪಾಸಿಟ್ ಖಾತೆಗಳನ್ನು ತೆರೆಯಿರಿ. ವರ್ಷ ಪೂರ್ತಿ ಇಲ್ಲಿ ಡೆಪಾಸಿಟ್ ಮಾಡಿದ ಉಳಿತಾಯದ ಮೊತ್ತ ಇನ್ಯಾವುದಾದರೂ ದೊಡ್ಡ ಕೆಲಸಕ್ಕೆ ಉಪಯೋಗವಾದೀತು.

LEAVE A REPLY

Please enter your comment!
Please enter your name here